Saturday, December 14, 2024
Homeಕ್ರೀಡೆಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌: ರಫೆಲ್ ನಡಾಲ್ ಚಾಂಪಿಯನ್‌

ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌: ರಫೆಲ್ ನಡಾಲ್ ಚಾಂಪಿಯನ್‌

ಮೆಲ್ಬರ್ನ್: ಪ್ರತಿಷ್ಠಿತ ಆಸ್ಟ್ರೇಲಿಯನ್ ಓಪನ್ 2022 ಟೆನಿಸ್ ಟೂರ್ನಿ ಗೆದ್ದಿರುವ ಸ್ಪೇನ್‌ನ ರಫೆಲ್ ನಡಾಲ್, ದಾಖಲೆಯ 21ನೇ ಗ್ರ್ಯಾನ್ ಸ್ಲಾಂ ಗೆದ್ದ ಹಿರಿಮೆಗೆ ಪಾತ್ರರಾದರು.

ಪುರುಷ ಸಿಂಗಲ್ಸ್ ವಿಭಾಗದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಆರನೇ ರ‍್ಯಾಂಕಿನ ನಡಾಲ್, ಎರಡನೇ ರ‍್ಯಾಂಕಿನ ರಷ್ಯಾದ ಡ್ಯಾನಿಲ್ ಮೆಡ್ವೆಡೆವ್ ವಿರುದ್ಧ 2-6, 6-7(5/7), 6-4, 6-4, 7-5ರ ಕಠಿಣ ಅಂತರದಲ್ಲಿ ಗೆಲುವು ದಾಖಲಿಸಿ ಪ್ರಶಸ್ತಿಗೆ ಮುತ್ತಿಕ್ಕಿದರು.

ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್ ಮತ್ತು ಸರ್ಬಿಯಾದ ನೊವಾಕ್ ಜೊಕೊವಿಚ್‌ ದಾಖಲೆಯನ್ನು ಮುರಿದು ಟೆನಿಸ್ ಅಂಗಣದ ನೂತನ ರಾಜ ಎನಿಸಿದ್ದಾರೆ.

ಪುರುಷ ಸಿಂಗಲ್ಸ್ ವಿಭಾಗದಲ್ಲಿ ಫೆಡರರ್ ಹಾಗೂ ಜೆಕೊವಿಚ್ ತಲಾ 20 ಗ್ರ್ಯಾನ್ ಸ್ಲಾಂ ಪ್ರಶಸ್ತಿಗಳನ್ನು ಜಯಿಸಿದ್ದಾರೆ. ಈ ದಾಖಲೆಯನ್ನೀಗ ಮುರಿದಿರುವ ನಡಾಲ್, ಪುರುಷ ಸಿಂಗಲ್ಸ್ ಇತಿಹಾಸದಲ್ಲೇ 21 ಗ್ರ್ಯಾನ್ ಸ್ಲಾಂ ಗೆದ್ದ ವಿಶ್ವದ ಮೊದಲ ಟೆನಿಸ್ ಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಐದು ತಾಸು 24 ನಿಮಿಷಗಳ ವರೆಗೆ ಸಾಗಿದ ಮ್ಯಾರಾಥನ್ ಹೋರಾಟದ ಅಂತ್ಯದಲ್ಲಿ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾದರು.