2003 ರಲ್ಲಿ ನಾನು ಎಂ ಎ ಮುಗಿಸಿದ್ದೆ. ಆ ದಿನಗಳಲ್ಲಿ ಮತ್ತಷ್ಟು ಓದಬೇಕಿತ್ತು ಅಂತ ಈಗ ಅನ್ನಿಸುತ್ತೆ. ಆದ್ರೂ ಪುಸ್ತಕದಲ್ಲಿ ಓದದಿದ್ದುದನ್ನ ಫಿಲಂ ನೋಡಿ ಕಲಿತೆ. ಆ ವರ್ಷ ಡಿಡಿಎಲ್ ಜೆ, ದಿಲ್ ಥೋ ಪಾಗಲ್ ಹೈ ದಂತಹ ಚಿತ್ರಗಳ ಗುಂಗಿನಿಂದ ಹೊರಬಂದು ಬೇರೆಯವರನ್ನ explore ಮಾಡೋಕೆ ಶುರು ಮಾಡಿದ್ದೆ. ಹಾಲಿವುಡ್ನ ಹಿಚ್ಕಾಕ್, ಡೇವಿಡ್ ಲೀನ್ ಕೊಂಚ ಇಷ್ಟವಾದರೆ, ಭಾರತದ ಸತ್ಯಜಿತ್ ರೇ ಬೋರ್ ಅನಿಸಿದ್ದರು. ಆಂದ್ರೆ ತರ್ಕೋವ್ಸ್ಕಿ ಅವರ “ಸೋಲಾರಿಸ್” ತಲೆ ಬುಡ ಅರ್ಥ ಆಗಿರಲಿಲ್ಲ. ಟಾಮ್ ಹ್ಯಾಂಕ್ಸ್ ನನಗೆ ಅಚ್ಚುಮೆಚ್ಚು. ಆತನ ಫಿಲಿಡೆಲ್ಫಿಯಾ, ಫಾರೆಸ್ಟ್ ಗಂಪ್, ಕಾಸ್ಟ್ ಅವೇ ತುಂಬ ಹಿಡಿಸಿತ್ತು. ನಂತರ ಯಾರೋ ಇರಾನಿಯನ್ ಫಿಲಂ ನೋಡೋ ಅಂತ ಸಲಹೆ ನೀಡಿದ್ದರು. ನ್ಯಾಷನಲ್ ಮಾರ್ಕೆಟ್ನಲ್ಲಿ ಪೈರೇಟೆಡ್ ಸಿಡಿ ತಂದು ಮಜೀದ್ ಮಜಿದಿ, ಅಬ್ಬಾಸ್ ಕಿರೋಸ್ತಾಮಿ ಮ್ಯಾಜಿಕ್ ನೋಡಿ ಬೆರಗಾಗಿದ್ದೆ. ದ ಕಲರ್ ಆಫ್ ಪ್ಯಾರಡೈಸ್ ಚಿತ್ರದಲ್ಲಿ ಕುರುಡು ಬಾಲಕನೊಬ್ಬ ಗೂಡಿಂದ ಬಿದ್ದ ಹಕ್ಕಿಮರಿಯೊಂದನ್ನು ಮರವೇರಿ ಮತ್ತೆ ಗೂಡು ಸೇರಿಸುವ ದೃಶ್ಯ, ಟೇಸ್ಟ್ ಆಫ್ ಚರಿ ಚಿತ್ರದ ಸುರಳಿ ಸುತ್ತುವ ರಸ್ತೆಗಳು ನನ್ನನ್ನ ಅತಿಯಾಗಿ ಕಾಡಿ ಚಿತ್ರಗಳು ಪ್ರಬಲ ಮತ್ತು ಪ್ರಭಾವಶಾಲಿ ಮಾಧ್ಯಮ ಅಂತ ಖಾತ್ರಿಪಡಿಸಿದ್ದವು. ಬಹುಶ ಎಲ್ಲಾ ಚಿತ್ರರಸಿಕರ exploration/ಡಿಸ್ಕವರಿ- ಟ್ರಾಜೆಕ್ಟರಿ ಇದೆ ರೀತಿ ಅನ್ನೋದು ನನ್ನ ಅನಿಸಿಕೆ
ಸ್ಥಳೀಯ ಚಿತ್ರಗಳ ವಿಚಾರ ಬಂದಾಗ, 2003ರಲ್ಲಿ ತೆರೆಕಂಡ ತಮಿಳು ಚಿತ್ರ ಅನ್ಬೆ ಶಿವಂ ಆಗ ನನ್ನ ಮೇಲೆ ಪ್ರಭಾವ ಬೀರಿತ್ತು. ನನ್ನworld view, outlook ಮತ್ತು ನಿಲುವುಗಳನ್ನ ರೂಪಿಸಿದ ಚಿತ್ರವದು. ಆಗಿನ ಕಾಲದ ನನ್ನ ಬುದ್ದಿಮಟ್ಟಕ್ಕೆ ಕೆಲ ವಿಚಾರಗಳನ್ನ ಮನಮುಟ್ಟುವಂತೆ ಈ ಚಿತ್ರ ಹೇಳಿತ್ತು. ಚಿತ್ರದಲ್ಲಿ ಬರುವ ಎರಡು ದೃಶ್ಯಗಳು/ಸಂವಾದಗಳ ಮೇಲೆ ಮಾತ್ರ ಇಲ್ಲಿ ಬೆಳಕು ಚಲ್ಲುವೆ- ಜಾಹಿರಾತು ಕ್ಷೇತ್ರದಲ್ಲಿ ಕೆಲಸ ಮಾಡುವ, ಪಕ್ಕ ಬಂಡವಾಳಶಾಹಿ ಮತ್ತು ಕೊಳ್ಳುಬಾಕ ಸಂಸ್ಕೃತಿಯ ಪ್ರಾಡಕ್ಟ್ ಆದ ಮೇಲ್ವರ್ಗದ ಅರಸು (ಮಾಧವನ್) ಮತ್ತು ಕಾಮ್ರೇಡ್ ಶಿವಂ (ಕಮಲಾ ಹಾಸನ್) ನಡುವೆ ನೆಡೆಯುವ ಚರ್ಚೆಯಿದು. ಕೆಲಸ ನಿಮಿತ್ತ ಭುಬನೇಶ್ವರಕ್ಕೆ ಹೋಗುವ ಸುರದ್ರೂಪಿ ಅರಸು ಅಕಾಲಿಕ ಮಳೆ ಹಾಗು ಪ್ರವಾಹದಿಂದ ಫ್ಲೈಟ್ ಕ್ಯಾನ್ಸಲ್ ಆಗಿ ಅಲ್ಲೇ ಸಿಕ್ಕಿಹಾಕಿಕೊಳ್ಳುತ್ತಾನೆ. ಬಹುಬೇಗ ಚೆನ್ನೈ ನಗರಕ್ಕೆ ಹಿಂದುರುಗಿ ತನ್ನ ಮದುವೆ ತಯಾರಿ ಮಾಡಿಕೊಳ್ಳಬೇಕೆಂಬ ಆತುರ ಅವನಿಗೆ. ವಿಮಾನ ನಿಲ್ದಾಣದಲ್ಲಿ ಕುರೂಪಿ ಕಾಮ್ರೇಡ್ ಶಿವಂ ಪರಿಚಯವಾಗುತ್ತೆ. ಶಿವಂ ಮುಖಚರ್ಯೆ ಗಮನಿಸುವ ಅರಸು ಆತನೊಬ್ಬ ಭಯೋತ್ಪಾದಕನಿರಬಹುದು ಎಂದು ಅನುಮಾನ ಪಡುತ್ತಾನೆ. (2001ರ ನಂತರದ ದಿನಗಳಲ್ಲಿ ಅನ್ಯರನ್ನ ಟೆರರಿಸ್ಟ್/ಬಾರ್ಬರಿಕ್ಸ್ ಅಂತ ಪರಿಗಣಿಸುವುದು ಸಾಮಾನ್ಯ) ಅರಸುವಿನ ಎಲ್ಲ ಅನುಮಾನಗಳು/ ಪೂರ್ವಗ್ರಹ ಪೀಡಿತ ಅನಿಸಿಕೆಗಳು ಹಲವು ಬಾರಿ ಹುಸಿಯಾಗುತ್ತವೆ.
ಕಥೆ ಹಾಗೆ ಮುಂದುವರೆದು ಕೊನೆಗೆ ರೈಲಿನಲ್ಲಿ ಚೆನ್ನೈಗೆ ಪ್ರಯಾಣ ಬಳಸುವುದು ಅಂತ ನಿರ್ಧಾರವಾಗುತ್ತೆ. ಅಹಂಕಾರಿ ಅರಸು ತನ್ನ ಕಾರ್ಡ್ ಬಳಸಿ ಫಸ್ಟ್ ಕ್ಲಾಸ್ ಟಿಕೆಟ್ ಬುಕ್ ಮಾಡಬೇಕೆಂದುಕೊಂಡರು ಆ ರೈಲಿನಲ್ಲಿ ಫಸ್ಟ್ ಕ್ಲಾಸ್ ಸೌಲಭ್ಯವೇ ಇರಲ್ಲ. ಜನ ಸಾಮಾನ್ಯರ ನಡುವೆ ಕುಳಿತು ಪ್ರಯಾಣಿಸುವುದು ಅರಸುವಿಗೆ ಅಸಹ್ಯ. ಶಿವಂ ಮತ್ತು ಅರಸು ನಡುವೆ ಆಗ ನಡೆಯುವ ಮಾತುಕತೆ ಇದು
ಅರಸು: ಈ ದೇಶ ದಲ್ಲಿ ದುಡ್ಡು ಬಿಸಾಕ್ತಿವಿ ಅಂದ್ರು ಒಳ್ಳೆ ಸೌಲಭ್ಯ ಕೊಡೋಕೆ ತಯಾರಿಲ್ಲ! ಇದೆ ನೋಡು ಭಾರತ ಅಂದ್ರೆ. ( ಖಾಸಗಿಕರಣಕ್ಕೆ ಉಳ್ಳವರು ಮಾಡುವ ವಾದವಿದು)
ಕಾಮ್ರೇಡ್ ಶಿವಂ: ಎಲ್ಲಿಯವರೆಗೆ ಹಣದಿಂದ ಎಲ್ಲವನ್ನೂ ಪಡೆಯಬಹುದು ಅಂತ ಅಂದುಕೊಳ್ಳುವ ನಿನ್ನಂತವರು ಇರುತ್ತಾರೋ ಅಲ್ಲಿಯವರೆಗೆ ಭಾರತ ಅಂದ್ರೆ ಹೀಗೆ ಇರತ್ತೆ.
ಅರಸು: ನೀನು ಮತ್ತದೇ ಹೇಳ್ತಿಯ ಸೋವಿಯೆತ್ ಒಕ್ಕೂಟ ಪ್ರಪಂಚದ ಶ್ರೇಷ್ಠ ರಾಷ್ಟ್ರ ಅಂತ.
ಶಿವಂ: ನಾನು ಹಾಗೆ ಹೇಳಲ್ಲ. ನಾನು ಅದನ್ನ ಒಪ್ಪುವುದೂ ಇಲ್ಲ.
ಅರಸು: ಒಪ್ಪಿಕ್ಕೋ. ನೀನು ಒಪ್ತಿಯೋ, ಬಿಡ್ತಿಯೋ ಸೋವಿಯತ್ ಇಂದು ಒಕ್ಕೂಟವಾಗಿ ಉಳಿದಿಲ್ಲ. ಸಣ್ಣ ಸಣ್ಣ ರಾಷ್ಟ್ರಗಳಾಗಿ ಹರಿದು ಹಂಚಿಹೋಗಿದೆ. ಸೋವಿಯತ್ ಇಲ್ಲವೆಂದರೆ ಕಮ್ಯೂನಿಸಂ ಇಲ್ಲ. ಮತ್ಯಾಕೆ ಅದರ ಬಗ್ಗೆ ಮಾತು?
ಶಿವಂ: ನೋಡಪ್ಪ ಮಿಸ್ಟರ್ ರೋಮಿಯೋ. ನಾಳೆ ತಾಜ್ ಮಹಲ್ ಬಿದ್ಹೋಯ್ತು ಅನ್ಕೋ, ಪ್ರೀತಿಸೋದು ಬಿಟ್ಬಿಡ್ತಿಯ?
ಅರಸು: ತುಂಬಾ ಬುದ್ದಿವಂತ! ಆದರೆ ಮಿಸ್ಟರ್ ಪ್ರೀತಿ ಅನ್ನೋದು ಭಾವನೆ
ಶಿವಂ: ಕಮ್ಯೂನಿಸಂ ಅನ್ನೋದು ಕೂಡ ಒಂದು ಬಲವಾದ ಭಾವನೆಯೇ!!!!
ಇಪ್ಪತ್ತ್ತೊಂದನೇ ಶತಮಾನದ ಮೊದಲ ದಶಕ ಅಮೇರಿಕಾದ ದಾದಾಗಿರಿಯ ದಿನಗಳು ಅಂತಲೇ ಹೇಳಬಹುದು. ತನ್ನ ಸಾಮ್ರಾಜ್ಯ ವಿಸ್ತರಿಸುವ ಭರದಲ್ಲಿ ಅನೇಕ ಅನೈತಿಕ ಯುದ್ಧಗಳನ್ನ ಮಾಡಿ ಲಕ್ಷಾಂತರ ಅಮಾಯಕರನ್ನ ಕೊಂದ ದಶಕವದು. ರಷ್ಯಾ ವಿಘಟನೆಯಿಂದ ಇನ್ನು ಸಂಪೂರ್ಣವಾಗಿ ಚೇತರಿಸಿಕೊಳ್ಳದ ದಿನಗಳಲ್ಲಿ, ಬಂಡವಾಳಶಾಹಿ ನೀತಿಗೆ ಪರ್ಯಾಯವಿಲ್ಲ ಎನ್ನುವ ದಿನಗಳಲ್ಲಿ ಬದ್ಧತೆ, ಸಮಾಜವಾದ, ಚಳುವಳಿ, ಸಂಘಟನೆ, ಒಗ್ಗಟ್ಟಿನಲ್ಲಿ ಅನ್ಬೆ ಶಿವಂ ಮೂಡಿಸಿದ ಭರವಸೆ ನೆನಪಿಸಿಕೊಳ್ಳುವಂತದ್ದು.
ಇಪ್ಪತ್ತ್ತೊಂದನೇ ಶತಮಾನದ ಮೊದಲ ದಶಕ ರಾತ್ರೋ ರಾತ್ರಿ ಹುಟ್ಟಿಕೊಂಡ ನೂರಾರು ಧರ್ಮಗುರುಗಳ, ಮಹಲಿನ ಸಂತರ ದಶಕ ಕೂಡ. ಭಾರತೀಯರಲ್ಲಿ ಹುಟ್ಟಿನಿಂದಲೇ ಅತಿಯಾಗಿ ಇರುವ ನಂಬಿಕೆಯನ್ನ ಬಂಡವಾಳವನ್ನಾಗಿಸಿಕೊಂಡ ಧರ್ಮಗುರುಗಳು ಅಧ್ಯಾತ್ಮವೆಂಬ ಬೃಹತ್ ಉದ್ಯಮ ಬೆಳೆಸಿದ ದಶಕವದು. ಧರ್ಮಗುರುಗಳು, ಉದ್ಯಮಿಗಳು, ರಾಜಕಾರಣಿಗಳು ಒಟ್ಟಿಗೆ ಕೂತು ಮತ ಕ್ರೋಢೀಕರಿಸಿಕೊಳ್ಳುತ್ತಿದ್ದ ದಿನಗಳವು. ಜೊತೆಗೆ ದೇವರ ಹೆಸರಲ್ಲಿ ಧ್ರುವೀಕೃತವಾಗುತ್ತಿದ್ದ ದಿನಗಳಲ್ಲಿ ದೇವರು ಯಾರೆಂಬ ಪ್ರಶ್ನೆಗೆ ನನಗೆ ನಿಖರ ಉತ್ತರ ನೀಡಿದ ಚಿತ್ರ ಅನ್ಬೆ ಶಿವಂ. ಈ ಮಾತುಕತೆ ಗಮನಿಸಿ
ಅರಸು: ನಾನು ನಿನ್ನಂತಲ್ಲ. ನನಗೆ ದೇವರಲ್ಲಿ ನಂಬಿಕೆಯಿದೆ.
ಕಾಮ್ರೇಡ್ ಶಿವಂ: ಯಾರು ಹೇಳಿದ್ದು ನನಗೆ ದೇವರಲ್ಲಿ ನಂಬಿಕೆ ಇಲ್ಲವೆಂದು?
ಅರಸು: ಒಹ್! ಇದಕ್ಕಿದ್ದ ಹಾಗೆ ನಿನಗೆ ದೇವರಲ್ಲಿ ನಂಬಿಕೆ ಹುಟ್ಟಿತೋ?
ಶಿವಂ: ನಾನು ಎಂದೆಂದಿಗೂ ದೇವರಲ್ಲಿ ಇಟ್ಟವನೇ.
ಅರಸು: ಯಾರು ಆ ದೇವರು?
(ರಾಮ, ಕೃಷ್ಣರ ಹೆಸರು ಅರಸು ನಿರೀಕ್ಷಿಸುವ ಉತ್ತರವಿರಬೇಕು)
ಶಿವಂ: ಆ ದೇವರು ನೀನು!!!
ಅರಸು: ಸುಮ್ನೆ ತಮಾಷೆ ಮಾಡ್ಬೇಡ.
ಶಿವಂ: ಇದು ತಮಾಷೆ ಅಲ್ಲ. ಪರರ, ಅನಾಮಿಕರ ನೋವಿಗೆ ಕಂಬನಿ ಮಿಡಿವ ಹೃದಯಗಳೆಲ್ಲವನ್ನೂ ನಾನು ದೇವರೆಂದು ಪರಿಗಣಿಸುತ್ತೇನೆ. ಈಗ ತಾನೇ ಆ ಮಗುವಿನ ಸಾವಿಗೆ ಕಂಬನಿ ಮಿಡಿದೆ. ನೀನೇ ದೇವರು! ದಯೆ, ಕರುಣೆ ಇರುವವರೆಲ್ಲಾ ದೇವರುಗಳೇ.
ಯಾರ್ ಯಾರ್ ಶಿವಂ
ನೀ ನಾನ್ ಶಿವಂ
ಬದುಕೇ ತಪಸ್ಸು
ಜೀವನವೇ ಧ್ಯಾನ
ಪ್ರೀತಿಯೇ ದೇವರು.
ವಿಶ್ವ ಬ್ಯಾಂಕ್ ಪೋಷಿತ ಖಾಸಗಿ ಒಡೆತನ, ದಬ್ಬಾಳಿಕೆಗಳ ವಿರುದ್ಧ ಹೋರಾಟ, ಶ್ರಮಿಕರಿಗೆ ನ್ಯಾಯಬದ್ಧ ಕೂಲಿ, ನಾಗರೀಕ ಹಕ್ಕುಗಳ ರಕ್ಷಣೆ, ಉಚಿತ ಶಿಕ್ಷಣ, ಅರೋಗ್ಯ ಸೌಲಭ್ಯ, ಪರಿಸರ ಸಂರಕ್ಷಣೆ, ಬುಡಕಟ್ಟು/ಕೆಳ ಜಾತಿ ಮತ್ತು ಸಮುದಾಯಗಳ ಪರವಾದ ದನಿ, ಸಾಮಾಜಿಕ ಚಳುವಳಿಗಳ ಸಿದ್ದಾಂತಗಳನ್ನ ಕೇವಲ ಕಮ್ಯುನಿಸ್ಟರು “ನಾಸ್ತಿಕರು” ಎಂದು brand ಮಾಡಿ ಅದರ ಆಧಾರದ ಮೇಲೆ ಸಾರಾಸಗಟಾಗಿ ತಳ್ಳಿ ಹಾಕಿಬಿಡುವ ಸೊ ಕಾಲ್ಡ್ “ಆಸ್ತಿಕರಿಗೆ” ಶಿವಂ ನೀಡುವ ಉತ್ತರ ಅದ್ಭುತ ಅನಿಸುತ್ತದೆ. ಅವನ ದೇವರ ಪರಿಕಲ್ಪನೆಗೆ ಸಾಟಿಯುಂಟೆ?
Planes, Trains and Automobiles ಎಂಬ ಹಾಲಿವುಡ್ ಚಿತ್ರದಿಂದ ಸಾಕಷ್ಟು ವಿಷಯಗಳನ್ನ ಕದ್ದು ಮಾಡಿದ ಚಿತ್ರ ಅನ್ಬೆ ಶಿವಂ ಅಂತ ನನಗೆ ಹತ್ತು ವರ್ಷಗಳ ನಂತರ ತಿಳಿಯಿತು. ಆ ಕ್ಷಣಕ್ಕೆ ಬೇಸರವಾದರೂ, ಆ ದಿನಗಳಲ್ಲಿ ಕಮ್ಯುನಿಸಂ, ಆಲ್ಟ್ರುಯಿಸಂ, ಯೇತಿಇಸಂ ಅನ್ನು ಸುಲಭವಾಗಿ ನನಗೆ ಅರ್ಥ ಮಾಡಿಸಿದ್ದು ಅನ್ಬೆ ಶಿವಂ ಚಿತ್ರ. ಇದೊಂದು ನ್ಯೂನ್ಯತೆಯಿಲ್ಲದ ಪರ್ಫೆಕ್ಟ್ ಚಿತ್ರವೆಂದು ನಾನು ಹೇಳಲಾರೆ ಆದರೆ ಇಡೀ ಚಿತ್ರವೇ ಒಂದು ಸುದೀರ್ಘ, ಅರ್ಥಪೂರ್ಣ ಡೈಲಾಗ್ ಆಗಿರುವ ಆನ್ಬೆ ಶಿವಂ ಪ್ರಸ್ತುತ ಕಾಲಘಟ್ಟದಲ್ಲಿ ಮುಖ್ಯವಾಗುತ್ತದೆ . ನಾ ಹೇಳುವೆ ನೀ ಕೇಳು ಎನ್ನುವ ಮೊನೊಲಾಗುಗಳ ದಿನಗಳದಲ್ಲಿ, dissentಗೆ ಅವಕಾಶವೇ ಇಲ್ಲದ ದುರಿತ ಕಾಲದಲ್ಲಿ for reassurance ಮತ್ತೊಮ್ಮೆ ಅನ್ಬೆ ಶಿವಂ ನೋಡಬೇಕು ಅನ್ನಿಸುತ್ತೆ. ಕಮಲ್ ಮನೋಜ್ಞ ಅಭಿನಯ. ಮಾಧವನ್ ಜೊತೆಗಿನ ಕಮಲ್ ಜುಗಲ್ಬಂದಿಗಳ ನಡುವೆ ನೆನಪಿನಲ್ಲಿ ಉಳಿದು ಬಿಡೋದು ಸಂಗು ಎಂಬ ಅಪಶಕುನದ ನಾಯಿ.
ಹರೀಶ್ ಗಂಗಾಧರ್