Saturday, December 14, 2024
Homeಉತ್ತರ ಕರ್ನಾಟಕಬೆಳಗಾವಿಇಬ್ರಾಹಿಂ ಜೊತೆ ಸಿದ್ದರಾಮಯ್ಯ ಮಾತನಾಡುತ್ತಾರೆ: ಸತೀಶ

ಇಬ್ರಾಹಿಂ ಜೊತೆ ಸಿದ್ದರಾಮಯ್ಯ ಮಾತನಾಡುತ್ತಾರೆ: ಸತೀಶ

ಬೆಳಗಾವಿ: ‘ಕಾಂಗ್ರೆಸ್ ಜೊತೆ ನನ್ನ ಸಂಬಂಧ ಮುಗಿದ ಅಧ್ಯಾಯ. ಮೂರು ವರ್ಷದ ವಿಧಾನಪರಿಷತ್ ಸ್ಥಾನಕ್ಕೆ ಶೀಘ್ರದಲ್ಲೇ ರಾಜೀನಾಮೆ ಕೊಡುತ್ತೇನೆ’ ಎಂದು ಹೇಳಿಕೆ ನೀಡಿರುವ ಕಾಂಗ್ರೆಸ್‌ ಸದಸ್ಯ ಸಿ.ಎಂ. ಇಬ್ರಾಹಿಂ ಅವರೊಂದಿಗೆ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರೇ ಮಾತನಾಡಿ ಸರಿಪಡಿಸುತ್ತಾರೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

ಜಿಲ್ಲೆಯ ಗೋಕಾಕದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಗುರುವಾರ ಮಾತನಾಡಿದ ಅವರು, ‘ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕರ ಸ್ಥಾನಕ್ಕೆ ಹೈಕಮಾಂಡ್‌ನವರು ಬಿ.ಕೆ. ಹರಿಪ್ರಸಾದ್ ಅವರನ್ನು ನೇಮಕ ಮಾಡಿದ್ದಾರೆ. ಪ್ರಕ್ರಿಯೆ ಮುಗಿದು ಹೋಗಿದೆ. ಈಗ ಏನೂ ಮಾಡಲಾಗದು. ಅದನ್ನು ಎಲ್ಲರೂ ಒಪ್ಪಬೇಕಾಗುತ್ತದೆ’ ಎಂದು ಪ್ರತಿಕ್ರಿಯಿಸಿದರು.

‘ಶಾಸಕ ರಮೇಶ ಜಾರಕಿಹೊಳಿ ಹಾಗೂ ವಿಧಾನಪರಿಷತ್ ಸದಸ್ಯ ಲಖನ್‌ ಜಾರಕಿಹೊಳಿ ಕಾಂಗ್ರೆಸ್‌ಗೆ ಬರುವುದಿಲ್ಲ; ನಾವು ಯಾವ ಕಾಲಕ್ಕೂ ಕರೆಯುವುದೂ ಇಲ್ಲ. ಸದ್ಯ ಅವರು ಬಿಜೆಪಿಯಲ್ಲಿದ್ದಾರೆ. ಹೀಗಾಗಿ, ಚರ್ಚೆ ಅನವಶ್ಯ. ಕಾಂಗ್ರೆಸ್‌ಗೆ ಬರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಸುಮ್ಮನೆ ಏನೋ ಹೇಳಿ ಎಲ್ಲೋ ಲಾಭ ಪಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಗುಡುಗು–ಸಿಡಿಲು ಮಾಡುತ್ತಿರುತ್ತಾರೆ’ ಎಂದು ವ್ಯಂಗ್ಯವಾಡಿದರು.

‘ಸಿದ್ದರಾಮಯ್ಯ ನಮ್ಮ ಗುರು ಎಂದು ಆಗಾಗ ಹೇಳುವ ಮೂಲಕ ಎರಡೂ ಕಡೆಯೂ ರಾಜಕೀಯ ಲಾಭ ಪಡೆಯಲು ಅವರು ಯತ್ನಿಸುತ್ತಿರುತ್ತಾರೆ. ಬಿಜೆಪಿ ನಾಯಕ ಸಂತೋಷ್‌, ಆರ್‌ಎಸ್‌ಎಸ್‌ ಮುಖಂಡ ಅಥಣಿಯ ಅರವಿಂದರಾವ್ ದೇಶಪಾಂಡೆ, ಮಹಾರಾಷ್ಟ್ರದ ದೇವೇಂದ್ರ ಫಡಣವಿಸ್, ಕೇಂದ್ರ ಸಚಿವ ಅಮಿತ್‌ ಶಾ ಅವರಿಗೆ ಕೇಳಿಸಲೆಂದು ಜೋರಾಗಿ ಗುಡುಗು–ಸಿಡಿಲು ಮಾಡುತ್ತಾರೆ. ಮಳೆ ಮಾತ್ರ (ಕಾಂಗ್ರೆಸ್‌ ಸೇರುವುದು)ಆಗುವುದಿಲ್ಲ’ ಎಂದು ಹೇಳಿದರು.

‘ಸಿದ್ದರಾಮಯ್ಯ, ಬಿ.ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ್, ಪ್ರಲ್ಹಾದ ಜೋಶಿ ನಮ್ಮ ನಾಯಕ ಎಂದು ಹೇಳಿ ಎರಡೂ ಕಡೆಯೂ ರಾಜಕೀಯ ಲಾಭ ಪಡೆಯಲು ನೋಡುತ್ತಿರುತ್ತಾರೆ. ಸಮಾಜ ಸೇವೆಗೆ ಮನಸ್ಸಿಲ್ಲ. ಗೋಕಾಕದಲ್ಲಿ ಈವರೆಗೂ ಪದವಿ ಕಾಲೇಜಿಲ್ಲ. 25 ವರ್ಷದಿಂದ ಶಾಸಕರು ಏನು ಮಾಡುತ್ತಿದ್ದಾರೋ ಗೊತ್ತಿಲ್ಲ. ಹೇಗಾದರೂ ಮಾಡಿ ಮಂತ್ರಿ ಆಗಬೇಕು ಎನ್ನುವುದು ಇಲ್ಲಿನ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರ ಉದ್ದೇಶವಷ್ಟೆ’ ಎಂದು ಟೀಕಿಸಿದರು.