ಬಾಗಲಕೋಟೆ: ತಾಲೂಕಿನ ಇಲಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯದರ್ಶಿ ಚಂದ್ರಶೇಖರ ಶ್ರೀಧರರಾವ ಹೊರಪೇಟ(58)ಸೋಮವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಳೆದ ಮೂರು ತಿಂಗಳ ಹಿಂದೆ ಕರ್ತವ್ಯ ಲೋಪದ ಆರೋಪದ ಹಿನ್ನೆಲೆಯಲ್ಲಿ ಚಂದ್ರಶೇಖರ ಅವರನ್ನು ಕೆಲಸದಿಂದ ಅಮಾನತ್ತು ಮಾಡಲಾಗಿತ್ತು. ಜೊತೆಗೆ ಮೋಟಾರ ಸೈಕಲ್ ಅಪಘಾತದಲ್ಲಿ ಕಾಲಿಗೆ ಪೆಟ್ಟಾಗಿ ನಡೆಯಲು ಬಾರದಂತಾಗಿ ನೋವಿನಿಂದ ಬಳಲುತ್ತಿದ್ದನೆಂದು ಹೇಳಲಾಗಿದೆ.
ಈ ಕುರಿತಂತೆ ಮೃತನ ಪತ್ನಿ ಪರಿಮಳ ಹೊರಪೇಟ ಬಾಗಲಕೋಟೆ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ವರದಿ ನೀಡಿದ್ದು, ನನ್ನ ಗಂಡ ಮಾನಸಿಕವಾಗಿ ನೊಂದುಕೊಂಡು ಮರಣ ಪತ್ರ ಬರೆದಿಟ್ಟು ಮನೆಯಲ್ಲಿ ಕಬ್ಬಿಣದ ಎಂಗಲ್ ಗೆ ಕ್ರೋಶರ ವಾಯರ್ ನಿಂದ ನೇಣು ಹಾಕಿಕೊಂಡು ಆತ್ಮ ಹತ್ಯೆ ಮಾಡಿಕೊಂಡಿದ್ದು, ಅವನ ಸಾವಿನಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದ್ದಾರೆ. ಗ್ರಾಮೀಣ ಪಿಎಸ್ ಐ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇಲಾಳ ಪಿಕೆಪಿಎಸ್ ನಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದ ಚಂದ್ರಶೇಖರ ಹೊರಪೇಟ ಅವರ ಮೇಲೆ ಭೃಷ್ಠಾಚಾರದ ಆರೋಪ ಕೇಳಿಬಂದಿತ್ತಲ್ಲದೇ, ಈ ಕುರಿತಂತೆ ಬಿಡಿಸಿಸಿ ಬ್ಯಾಂಕ್ ನಿಂದ ತನಿಖೆಯೂ ನಡೆದಿತ್ತೆಂದು ಹೇಳಲಾಗಿದೆ.