Saturday, December 14, 2024
Homeರಾಜ್ಯಬೆಂಗಳೂರು ವಿಭಾಗಇಸ್ರೊ ಯೋಜನೆ ಸ್ಥಳಾಂತರಿಸದಂತೆ ಡಿಕೆಶಿ ಆಗ್ರಹ

ಇಸ್ರೊ ಯೋಜನೆ ಸ್ಥಳಾಂತರಿಸದಂತೆ ಡಿಕೆಶಿ ಆಗ್ರಹ

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಮಾನವಸಹಿತ ಗಗನಯಾನ ಯೋಜನೆಯನ್ನು ಬೆಂಗಳೂರಿನಿಂದ ಗುಜರಾತ್‌ಗೆ ಸ್ಥಳಾಂತರಿಸುವ ಪ್ರಸ್ತಾವ ಕೈಬಿಡುವಂತೆ ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಪತ್ರ ಬರೆದಿದ್ದಾರೆ.

‘ಇಸ್ರೊ ಕೇಂದ್ರ ಕಚೇರಿಯನ್ನು ಹೊಂದಿರುವ ಬೆಂಗಳೂರಿನಲ್ಲಿ ಮಾನವಸಹಿತ ಗಗನಯಾನ ಯೋಜನೆಗಾಗಿ 2007 ರಿಂದಲೂ ಸಿದ್ಧತೆ ನಡೆಯುತ್ತಿದೆ. 2023ರಲ್ಲಿ ಮಾನವಸಹಿತ ಗಗನಯಾನ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಈ ಯೋಜನೆಯನ್ನು ಗುಜರಾತ್‌ಗೆ ಸ್ಥಳಾಂತರಿಸುವ ಪ್ರಸ್ತಾವವಿದೆ ಎಂಬ ಸುದ್ದಿ ಕನ್ನಡಿಗರಿಗೆ ಬೇಸರ ಉಂಟುಮಾಡಿದೆ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಈ ಯೋಜನೆಯನ್ನು ಗುಜರಾತ್‌ಗೆ ಸ್ಥಳಾಂತರಿಸಿದರೆ ಅದು ಒಕ್ಕೂಟ ವ್ಯವಸ್ಥೆಗೆ ಬಗೆಯುವ ದ್ರೋಹ. ಇಂತಹ ಪ್ರಕ್ರಿಯೆ ಕನ್ನಡಿಗರ ಸ್ವಾಭಿಮಾನ ಮತ್ತು ಆತ್ಮಗೌರವಕ್ಕೆ ಧಕ್ಕೆ ತರಲಿದೆ. ಆದ್ದರಿಂದ, ಮಾನವಸಹಿತ ಗಗನಯಾನ ಯೋಜನೆಯನ್ನು ಬೆಂಗಳೂರಿನಿಂದ ಸ್ಥಳಾಂತರಿಸುವ ಪ್ರಸ್ತಾವ ಕೈಬಿಡಬೇಕು. ನಗರದಿಂದಲೇ ಯೋಜನೆ ಕಾರ್ಯರೂಪಕ್ಕೆ ಬರುವಂತೆ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿಯವರಿಗೆ ಪ್ರತ್ಯೇಕ ಪತ್ರ ಬರೆದಿರುವ ಶಿವಕುಮಾರ್‌, ‘ಈ ವಿಷಯದಲ್ಲಿ ರಾಜ್ಯದ ಮುಖಂಡರ ನಿಯೋಗವೊಂದನ್ನು ದೆಹಲಿಗೆ ಕರೆದೊಯ್ದು ಪ್ರಧಾನಿಯವರ ಮೇಲೆ ಒತ್ತಡ ಹೇರಬೇಕು. ಯೋಜನೆ ಸ್ಥಳಾಂತರದ ಪ್ರಸ್ತಾವ ಕೈಬಿಡುವಂತೆ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.