Saturday, December 14, 2024
Homeಉತ್ತರ ಕರ್ನಾಟಕಬೆಳಗಾವಿಈಶ್ವರಪ್ಪ ರಾಜೀನಾಮೆ ಬಗ್ಗೆ ಶೀಘ್ರದಲ್ಲೆ ತೀರ್ಮಾನ: ಅರುಣ್ ಸಿಂಗ್

ಈಶ್ವರಪ್ಪ ರಾಜೀನಾಮೆ ಬಗ್ಗೆ ಶೀಘ್ರದಲ್ಲೆ ತೀರ್ಮಾನ: ಅರುಣ್ ಸಿಂಗ್

ಬೆಳಗಾವಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರ ರಾಜೀನಾಮೆ ಕುರಿತು ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ಬಿಜೆಪಿ ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ಹೇಳಿದರು.

ಇಲ್ಲಿ ಪತ್ರಕರ್ತರೊಂದಿಗೆ ಬುಧವಾರ ಮಾತನಾಡಿದ ಅವರು, ಕರ್ನಾಟಕದಲ್ಲಿ ನಡೆದಿರುವುದು ಸಣ್ಣ ಘಟನೆಯಲ್ಲ. ಇದರ ಹಿಂದೆ ಖಂಡಿತವಾಗಿಯೂ ದೊಡ್ಡ ಕೈವಾಡವಿದೆ. ಸಾವಿನ ಮನೆಯಲ್ಲಿ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.

ಗುತ್ತಿಗೆದಾರ ಸಂತೋಷ್ ಪಾಟೀಲ ಸಾವಿನ ಪ್ರಕರಣದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ತನಿಖೆ ನಡೆಸುತ್ತಿದ್ದಾರೆ. ಹಲವು ಅಯಾಮಗಳಿವೆ. ಘಟನೆಯ ಹಿಂದೆ ಯಾರಾರಿದ್ದಾರೆ ಎನ್ನುವುದನ್ನು ತನಿಖೆ ನಡೆಸಬೇಕಾಗುತ್ತದೆ. ಇದನ್ನು ಸಣ್ಣ ಘಟನೆ ಎಂದು ಪರಿಗಣಿಸಬಾರದು‌. ಇದು ಗಂಭೀರವಾದ ವಿಷಯವಾಗಿದೆ.‌ ಶೀಘ್ರದಲ್ಲೇ ಒಂದು‌ ನಿರ್ಣಯಕ್ಕೆ ಬರಲಾಗುವುದು ಎಂದರು.

ಸಂತೋಷ್ ಸಾವಿನ ಪ್ರಕರಣ‌ ಬಹಳ ದುಃಖದ‌ ವಿಷಯ. ಅದಕ್ಕಾಗಿ ಸಂತಾಪ ಸೂಚಿಸುತ್ತೇನೆ ಎಂದು ಹೇಳಿದರು.

ಘಟನೆಯ ಬಗ್ಗೆ ಮಾಹಿತಿ ಕೊಡುವಂತೆ ಅವರಿಗೆ ಹೈಕಮಾಂಡ್ ಸೂಚಿಸಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅವರು ಮಾಹಿತಿ ಸಂಗ್ರಹದಲ್ಲಿ ತೊಡಗಿದ್ದಾರೆ ಎಂದು ತಿಳಿದುಬಂದಿದೆ.