Saturday, December 14, 2024
Homeಉದ್ಯೋಗಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಗುತ್ತಿಗೆ ಆಧಾರದಲ್ಲಿ ನೇಮಕಕ್ಕೆ ಅರ್ಜಿ ಆಹ್ವಾನ

ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಗುತ್ತಿಗೆ ಆಧಾರದಲ್ಲಿ ನೇಮಕಕ್ಕೆ ಅರ್ಜಿ ಆಹ್ವಾನ

ದಾವಣಗೆರೆ: ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ದಾವಣಗೆರೆ ಜಿಲ್ಲಾಡಳಿತ ವತಿಯಿಂದ ದಾವಣಗೆರೆ ತಾಲ್ಲೂಕು, ಆನಗೋಡು ಸಮೀಪ ಹುಳುಪಿನಕಟ್ಟೆ ಗ್ರಾಮ ವ್ಯಾಪ್ತಿಯಲ್ಲಿ ಸ್ಥಾಪಿಸಲಾಗುತ್ತಿರುವ ದಾವಣಗೆರೆ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲು ಆಸಕ್ತ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ದಾವಣಗೆರೆ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರವು ನೊಂದಾಯಿತ ಸೊಸೈಟಿ ಮೂಲಕ ನಿರ್ವಹಿಸಲ್ಪಡುತ್ತಿದ್ದು, ವಿಜ್ಞಾನ ಕೇಂದ್ರದಲ್ಲಿ ಕ್ಯುರೇಟರ್ ಮತ್ತು ತಾಂತ್ರಿಕ ಸಹಾಯಕರ ತಲಾ 1 ಹುದ್ದೆಗಳಿಗೆ ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಕ್ಯುರೇಟರ್ 01 ಹುದ್ದೆಗೆ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಪದವಿಯಲ್ಲಿ ಮೆಕ್ಯಾನಿಕಲ್, ಕಂಪ್ಯೂಟರ್ ಸೈನ್ಸ್, ಇನ್‍ಫಾರ್‍ಮೇಶನ್ ಸೈನ್ಸ್‍ನಲ್ಲಿ ಪದವಿ ಹೊಂದಿರಬೇಕು. ಅಥವಾ ಎಂ.ಎಸ್.ಸಿ ನಲ್ಲಿ ಭೌತಶಾಸ್ತ್ರ, ರಾಸಾಯನಶಾಸ್ತ್ರ, ಪ್ರಾಣಿಶಾಸ್ತ್ರ, ಅರಣ್ಯಶಾಸ್ತ್ರ, ಪರಿಸರ ವಿಜ್ಞಾನ ಗಳಲ್ಲಿ ಪದವಿ ಹೊಂದಿದ್ದು, ಸಂಶೋಧನೆ, ವಿನ್ಯಾಸ, ವರ್ಕಶಾಪ್, ಎಂಇ, ಎಂಟೆಕ್, ಪಿಹೆಚ್‍ಡಿ (ವಿಜ್ಞಾನ) ಗಳಲ್ಲಿ ಬೋಧಿಸಿದ 01 ವರ್ಷದ ಅನುಭವವಿರಬೇಕು. ಇವರಿಗೆ ಒಟ್ಟಾರೆ ವೇತನ ತಿಂಗಳಿಗೆ ರೂ. 25,000 ನೀಡಲಾಗುವುದು.

ತಾಂತ್ರಿಕ ಸಹಾಯಕ 1 ಹುದ್ದೆಗೆ ಮಾನ್ಯತೆ ಪಡೆದ ಸಂಸ್ಥೆಯಿಂದ 3 ವರ್ಷ ಡಿಪ್ಲೋಮಾ ಕೋರ್ಸ್‍ನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್, ಇನ್ಸ್ಟ್ರೂಮೆನ್‍ಟೇಶನ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್‍ನಲ್ಲಿ ಪದವಿ ಹೊಂದಿರಬೇಕು. ಕನಿಷ್ಠ 1 ವರ್ಷದ ಅನುಭವವಿರಬೇಕು. ಇವರಿಗೆ ತಿಂಗಳಿಗೆ ಒಟ್ಟಾರೆ ವೇತನ ರೂ. 20,000 ನೀಡಲಾಗುವುದು.

ಅರ್ಜಿ ಸಲ್ಲಿಸಲು ಆಸಕ್ತ ಅಭ್ಯರ್ಥಿಗಳು ನಿಗದಿತ ನಮೂನೆಯನ್ನು ಉಪನಿರ್ದೇಶಕರು (ಆಡಳಿತ) ಸಾರ್ವಜನಿಕ ಶಿಕ್ಷಣ ಇಲಾಖೆ, ಕೆ.ಇ.ಬಿ ಸರ್ಕಲ್ ಹತ್ತಿರ, ದಾವಣಗೆರೆ ಇವರ ಕಾರ್ಯಾಲಯದಲ್ಲಿ ಪಡೆದು, ದೃಢೀಕೃತ ದಾಖಲೆಗಳೊಂದಿಗೆ ಅ.30 ರಂದು ಸಂಜೆ 5 ಗಂಟೆಯೊಳಗಾಗಿ ಇದೇ ಕಾರ್ಯಾಲಯಕ್ಕೆ ಸಲ್ಲಿಸಬೇಕು.

ಈ ಹುದ್ದೆಗಳು ಸರ್ಕಾರದಿಂದ ಅನುಮೋದಿತ ಹುದ್ದೆಗಳಾಗಿರುವುದಿಲ್ಲ ಹಾಗೂ 1 ವರ್ಷದ ಅವಧಿಗೆ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುವುದು. ಖಾಯಮಾತಿಗೆ ಯಾವುದೇ ಅವಕಾಶವಿರುವುದಿಲ್ಲ. 1 ವರ್ಷದ ಗುತ್ತಿಗೆ ಅವಧಿಯನ್ನು ತೃಪ್ತಿಕರವಾಗಿ ಪೂರೈಸಿದಲ್ಲಿ, ಆದ್ಯತೆಯ ಮೇರೆಗೆ ಅಗತ್ಯವಿದ್ದಲ್ಲಿ ಮತ್ತೂಂದು ವರ್ಷಕ್ಕೆ ವಿಸ್ತರಿಸಲಾಗುವುದು. ಆಯ್ಕೆಯಾದ ನಂತರ ತಪ್ಪು ಮಾಹಿತಿ ಅಥವಾ ನಕಲಿ ದಾಖಲೆಗಳು ಕಂಡು ಬಂದಲ್ಲಿ ಯಾವುದೇ ಮುನ್ನೆಚ್ಚರಿಕೆ ನೀಡದೆ ನೇಮಕಾತಿ ರದ್ದುಪಡಿಸಿ ಕಾನೂನಿನ ರೀತ್ಯ ಕ್ರಿಮಿನಲ್ ಮೊಕದ್ದಮೆಯನ್ನು ಹೂಡಲಾಗುವುದು. ಆಯ್ಕೆ ಸಮಿತಿಯ ನಡೆಸುವ ಸಂದರ್ಶನದ ಆಧಾರದ ಮೇಲೆ ಆಯ್ಕೆ ಪಟ್ಟಿ ಪ್ರಕಟಿಸಲಾಗುವುದು.

ಹೆಚ್ಚಿನ ವಿವರಗಳಿಗಾಗಿ ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ದೂ.ಸಂ. 08192-231607 ಗೆ ಸಂಪರ್ಕಿಸಬಹುದು ಎಂದು ಉಪಪ್ರಾದೇಶಿಕ ವಿಜ್ಞಾನ ಕೇಂದ್ರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.