ಬೆಳಗಾವಿ: ‘ಅತಿವೃಷ್ಟಿ ಮತ್ತು ಪ್ರವಾಹದಿಂದ ಹಾನಿಗೊಳಗಾದ ಬೆಳೆಗೆ ಪ್ರತಿ ಎಕರೆಗೆ ₹20ಸಾವಿರ ಪರಿಹಾರ ನೀಡಬೇಕು’ ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತೀಯ ಕೃಷಿಕ ಸಮಾಜದವರು ಸುವರ್ಣ ವಿಧಾನಸೌಧದ ಬಳಿ ಶುಕ್ರವಾರ ಪ್ರತಿಭಟನೆ ನಡೆಸಿದರು.
‘ಬೆಳೆ ಹಾನಿ ಪರಿಹಾರವನ್ನು ಇನ್ನೂ ಕೊಡದಿರುವುದು ಖಂಡನೀಯ. ಇದರಿಂದ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೂಡಲೇ ಪರಿಹಾರ ಜಮಾ ಮಾಡಬೇಕು. ಎಲ್ಲ ಬೆಳೆಗಳನ್ನೂ ಫಸಲ್ ವಿಮಾ ಯೋಜನೆಗೆ ಒಳಪಡಿಸಬೇಕು. ರೈತರ ಸಾಲ ಮನ್ನಾ ಮಾಡಬೇಕು. ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಅನ್ನು ಉಚಿತವಾಗಿ ಒದಗಿಸಬೇಕು. ಟನ್ ಕಬ್ಬಿಗೆ ₹ 3,500 ನಿಗದಿಪಡಿಸಬೇಕು’ ಎಂದು ಒತ್ತಾಯಿಸಿದರು.
‘ಕನಿಷ್ಠ ಬೆಂಬಲ ಬೆಲೆ ಶಾಸನಬದ್ಧಗೊಳಿಸಬೇಕು. ಪ್ರಮುಖ ಇಲಾಖೆಗಳ ಕಚೇರಿಗಳನ್ನು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಬೇಕು. ಕಾಗವಾಡ ತಾಲ್ಲೂಕಿನ ಮಂಗಾವತಿ, ಜುಗುಳ ಹಾಗೂ ಶಹಾಪುರ ಗ್ರಾಮಗಳನ್ನು ಮುಳುಗಡೆ ಪ್ರದೇಶವೆಂದು ಘೋಷಿಸಬೇಕು. ಸಂತ್ರಸ್ತರಿಗೆ ತ್ವರಿತವಾಗಿ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.
ಅಧ್ಯಕ್ಷ ಲಿಂಗರಾಜ ಪಾಟೀಲ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷ ಗುರುಗೌಡ ಪಾಟೀಲ ನೇತೃತ್ವ ವಹಿಸಿದ್ದರು.