ಮುಂಬೈ: ಕ್ರಿಕೆಟ್‌ನ ಇತಿಹಾಸದಲ್ಲಿ ಒಂದು ಇನ್ನಿಂಗ್ಸ್‌ನಲ್ಲಿ ಒಬ್ಬ ಬೌಲರ್ ಎಲ್ಲ 10 ವಿಕೆಟ್ ಗಳಿಸಿದ ಸಾಧನೆ ಮಾಡಿದ ಮೂರನೇ ಬೌಲರ್ ಎಂಬ ದಾಖಲೆಗೆ ನ್ಯೂಜಿಲೆಂಡ್ ತಂಡದ ಸ್ಪಿನ್ನರ್ ಎಜಾಜ್ ಪಟೇಲ್ ಪಾತ್ರರಾಗಿದ್ದಾರೆ.
ಭಾರತ–ನ್ಯೂಜಿಲೆಂಡ್ ಮಧ್ಯೆ ನಡೆಯುತ್ತಿರುವ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಇಲ್ಲಿನ ವಾಂಖಡೆ ಸ್ಟೇಡಿಯಂನಲ್ಲಿ ಎಜಾಜ್ ಪಟೇಲ್ ಈ ಸಾಧನೆ ಮಾಡಿದ್ದಾರೆ. ಎಜಾಜ್ ಪಟೇಲ್ ಮೂಲತಃ ಭಾರತೀಯ. ಮುಂಬೈಯಲ್ಲೇ ಹುಟ್ಟಿ ಬಾಲ್ಯ ಕಳೆದವರು. ಬಳಿಕ ಹೆತ್ತವರು ನ್ಯೂಜಿಲೆಂಡ್‌ಗೆ ಹೋಗಿ ನೆಲೆಸಿದ್ದರು. ತಾನು ಹುಟ್ಟಿದ ನೆಲದಲ್ಲೇ ಎಜಾಜ್ ಈ ಸಾಧನೆ ಮಾಡಿದ್ದಾರೆ.
ಮೊದಲ ದಿನ 4 ವಿಕೆಟ್ ಗಳಿಸಿದ್ದ ಎಜಾಜ್ ಎರಡನೇ ದಿನ ಉಳಿದ ಎಲ್ಲ 6 ವಿಕೆಟ್ ಪಡೆದು ದಾಖಲೆ ಬರೆದರು. ಅವರ ಸ್ಪಿನ್‌ನಿಂದಾಗ ಭಾರತ 325 ರನ್‌ಗಳಷ್ಟೇ ಗಳಿಸಿತು. ಎಜಾಜ್ ಸಾಧನೆಯ ಮುಂದೆ ಮಯಾಂಕ್ ನೆಲಕಚ್ಚಿ ಆಡಿ 150 ರನ್ ಗಳಿಸಿರುವುದು ಕೂಡಾ ಮಂಕಾಯಿತು.ಎಜಾಜ್ ಪಟೇಲ್ ಅವರ ಸಾಧನೆ ತಂಡಕ್ಕೆ ಖುಷಿ ತಂದರೂ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದಾಗಿ ಅದನ್ನು ಸಂಭ್ರಮಿಸುವ ಸ್ಥಿತಿಯಲ್ಲಿ ನ್ಯೂಜಿಲೆಂಡ್ ಇಲ್ಲ. ನ್ಯೂಜಿಲೆಂಡ್ 62 ರನ್‌ಗಳಿಗೆ ಆಲೌಟ್ ಆಗಿದೆ, ರವಿಚಂದ್ರನ್ ಅಶ್ವಿನ್ 4 ವಿಕೆಟ್, ಸಿರಾಜ್ ಅಹ್ಮದ್ 3 ವಿಕೆಟ್, ಅಕ್ಷರ್ ಪಟೇಲ್ 2 ವಿಕೆಟ್, ಜಯಂತ್ 1 ವಿಕೆಟ್ ಗಳಿಸಿ ಮಿಂಚಿದರು. ಭಾರತವು ಫಾಲೊವನ್ ನೀಡದೇ ಭಾರತ ಎರಡನೇ ಇನ್ನಿಂಗ್ಸ್ ಆರಂಭಿಸಿತು. ಎರಡನೇ ದಿನದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೇ 69 ರನ್ ಗಳಿಸಿತ್ತು. ಮಯಾಂಕ್ ಅಗರ್‌ವಾಲ್ ಅಜೇಯ 38 ರನ್ ಗಳಿಸಿದರೆ, ಅವರ ಜತೆ ಇನ್ನಿಂಗ್ಸ್ ಆರಂಭಿಸಿದ ಚೇತೇಶ್ವರ ಪೂಜಾರ ಅಜೇಯ 29 ರನ್ ಗಳಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ.