Saturday, December 14, 2024
Homeರಾಜ್ಯಮೈಸೂರು ವಿಭಾಗಎಟಿಎಂನಲ್ಲಿ ಸಿಕ್ಕಿತು ‘ಸ್ಕಿಮ್ಮರ್‌’!

ಎಟಿಎಂನಲ್ಲಿ ಸಿಕ್ಕಿತು ‘ಸ್ಕಿಮ್ಮರ್‌’!

ಮೈಸೂರು: ಎಟಿಎಂ ಯಂತ್ರಗಳಿಗೆ ‘ಸ್ಕಿಮ್ಮರ್‌’ ಯಂತ್ರಗಳನ್ನು ಅಳವಡಿಸಿ, ಹಣ ದೋಚುವ ವ್ಯವಸ್ಥಿತ ಜಾಲ ನಗರದಲ್ಲಿ ಸಕ್ರಿಯವಾಗಿದೆ. ಶಾರದಾದೇವಿನಗರದ ಕೆನರಾ ಬ್ಯಾಂಕಿನ ಎಟಿಎಂವೊಂದರಲ್ಲಿ ಅಳವಡಿಸಿದ್ದ ‘ಸ್ಕಿಮ್ಮರ್’ ಯಂತ್ರವನ್ನು ಗುರುವಾರ ನಿವೃತ್ತ ಶಿಕ್ಷಕ ನಾರಾಯಣಪ್ಪ ತೆಗೆದು ಪೊಲೀಸರಿಗೆ ನೀಡಿ, ದೂರು ದಾಖಲಿಸಿದ್ದಾರೆ.

ಇದಕ್ಕೂ ಮುನ್ನ ಅವರಿಗೆ ಸೆ. 6ರಂದು ಮಂಡ್ಯದ ಎಟಿಎಂನಿಂದ ₹ 5 ಸಾವಿರ ಹಣ ಡ್ರಾ ಮಾಡಿ ವಂಚಿಸಲಾಗಿತ್ತು. ನಂತರ ಇವರು ಸೈಬರ್ ಠಾಣೆಗೆ ದೂರು ನೀಡಿದ್ದರು. ತಮ್ಮ ಎಟಿಎಂ ಬ್ಲಾಕ್ ಮಾಡಿಸಿ, ಹೊಸ ಎಟಿಎಂ ಪಡೆದುಕೊಂಡಿದ್ದರು. ಆಗ ಅವರಿಗೆ ಎಟಿಎಂಗಳಲ್ಲಿ ಅಳವಡಿಸಿರುವ ‘ಸ್ಕಿಮ್ಮರ್’ ಯಂತ್ರಗಳ ಮಾಹಿತಿ ಸಿಕ್ಕಿತು.

ಈ ಘಟನೆಯ ನಂತರ ಅವರು ಹಣ ಪಡೆಯುವಾಗ ಎಟಿಎಂನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಗುರುವಾರ ಶಾರದಾದೇವಿನಗರ ವೃತ್ತದಲ್ಲಿನ ಎಟಿಎಂನಲ್ಲಿ ಹಣ ಪಡೆಯುವಾಗ ಕಾರ್ಡ್ ಹಾಕುವ ಜಾಗವನ್ನು ಸ್ವಲ್ಪ ಅಲುಗಾಡಿಸಿದ್ದಾರೆ. ಆಗ ಅವರ ಕೈಗೆ ‘ಸ್ಕಿಮ್ಮರ್’ ಯಂತ್ರ ಬಂದಿದೆ. ಕೂಡಲೇ ಅವರು ಸೈಬರ್ ಪೊಲೀಸರಿಗೆ ಮೊಬೈಲ್ ಫೋನ್ ಕರೆ ಮಾಡಿ ವಿಷಯ ತಿಳಿಸಿದರು. ಆದರೆ, ಪೊಲೀಸರು ಠಾಣೆಗೆ ಬರುವಂತೆ ಸೂಚಿಸಿದರು.

ಯಂತ್ರದೊಂದಿಗೆ ನಾರಾಯಣಪ್ಪ ನಗರ ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ ಅವರಿಗೆ ನೀಡಿ, ‘ಸ್ಕಿಮ್ಮಿಂಗ್’ ಜಾಲವನ್ನು ನಿಗ್ರಹಿಸಿ, ಅಮಾಯಕರ ಹಣ ಕಳ್ಳರ ಪಾಲಾಗುವುದನ್ನು ತಡೆಯಬೇಕು ಎಂದು ಮನವಿ ಮಾಡಿದರು. ಜತೆಗೆ, ಈ ಸಂಬಂಧ ಅವರು ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

‘ಎಟಿಎಂನಲ್ಲಿ ಹಣ ಪಡೆಯುವಾಗ ಎಚ್ಚರದಿಂದಿರಬೇಕು. ಭದ್ರತಾ ಸಿಬ್ಬಂದಿ ಇರುವ ಎಟಿಎಂ ಬಳಕೆ ಮಾಡಿದರೆ ಒಳಿತು’ ಎಂದು ನಾರಾಯಣಪ್ಪ ತಿಳಿಸಿದರು.

ಏನಿದು ‘ಸ್ಕಿಮ್ಮಿಂಗ್‌’?: ಎಟಿಎಂ ಯಂತ್ರಗಳ ಕಾರ್ಡ್‌ ಹಾಕುವ ಜಾಗ ಹಾಗೂ ಕೀಪ್ಯಾಡ್‌ನ ಮೇಲೆ ಅದನ್ನೇ ಹೋಲುವ ಸ್ಕಿಮ್ಮರ್ ಯಂತ್ರಗಳನ್ನು ಕಳ್ಳರು ಅಳವಡಿಸಿರುತ್ತಾರೆ. ಕಾರ್ಡ್‌ನಲ್ಲಿನ ದತ್ತಾಂಶ ಹಾಗೂ ಕೀಪ್ಯಾಡ್‌ನ ಮೇಲೆ ನಮೂದಿಸುವ ಪಾಸ್‌ವರ್ಡ್‌ಗಳು ಇಲ್ಲಿ ದಾಖಲಾಗುತ್ತವೆ. ನಂತರ, ವಂಚಕರು ನಕಲಿ ಎಟಿಎಂ ಕಾರ್ಡ್‌ ತಯಾರಿಸಿ, ಹಣ ಡ್ರಾ ಮಾಡಿಕೊಳ್ಳುತ್ತಾರೆ.