ಬೆಳಗಾವಿ: ಅಖಿಲ ಭಾರತ ಎನ್‌ಸಿಸಿ ಚಾರಣ ಶಿಬಿರ– ‘ಬೆಳಗಾವಿ ಟ್ರೆಕ್-2021’ ಇಲ್ಲಿ ಆರಂಭವಾಗಿದೆ.
ಎನ್‌ಸಿಸಿ ಗ್ರೂಪ್ ಬೆಳಗಾವಿಯು ಎನ್‌ಸಿಸಿ ನಿರ್ದೇಶನಾಲಯ ಕರ್ನಾಟಕ ಮತ್ತು ಗೋವಾ ಆಶ್ರಯದಲ್ಲಿ ಡಿ.21ರವರೆಗೆ ಹಮ್ಮಿಕೊಂಡಿದೆ.
ತಾಲ್ಲೂಕಿನ ಬಸುರ್ತೆಯಿಂದ ವೈಜನಾಥ ದೇವಸ್ಥಾನದವರೆಗೆ ಮತ್ತು ಬೆಳಗುಂಡಿಯಿಂದ ಹಂಗರಗಾದವರೆಗಿನ ಮೊದಲ ಚಾರಣವನ್ನು ಉತ್ತರ ಮತಕ್ಷೇತ್ರದ ಬಿಜೆಪಿ ಶಾಸಕ ಅನಿಲ ಬೆನಕೆ ಉದ್ಘಾಟಿಸಿದರು.
ಎನ್‌ಸಿಸಿ ಗ್ರೂಪ್ ಕಮಾಂಡರ್ ಕರ್ನಲ್ ಕೆ. ಶ್ರೀನಿವಾಸ್ ಮಾತನಾಡಿ, ‘ಆಂಧ್ರ, ತೆಲಂಗಾಣ, ತಮಿಳುನಾಡು, ಪಾಂಡಿಚೇರಿ, ಕೇರಳ, ಲಕ್ಷದ್ವೀಪ, ಮಧ್ಯಪ್ರದೇಶ, ಛತ್ತೀಸ್‌ಗಡ, ಗುಜರಾತ್, ಮಹಾರಾಷ್ಟ್ರ, ಕರ್ನಾಟಕ ಮತ್ತು ಗೋವಾ ಸೇರಿದಂತೆ 12 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಿಂದ 7 ಎನ್‌ಸಿಸಿ ನಿರ್ದೇಶನಾಲಯಗಳ 400 ಕೆಡೆಟ್‌ಗಳು ಭಾಗವಹಿಸಿದ್ದಾರೆ’ ಎಂದು ತಿಳಿಸಿದರು.
‘ಬೆಳಗುಂದಿ ಮತ್ತು ಮಹಿಪಾಲಗಡ ಪ್ರದೇಶಗಳಲ್ಲಿ ಚಾರಣ ನಡೆಸಲಾಗುವುದು. ಕೆಡೆಟ್‌ಗಳು ಶೈಕ್ಷಣಿಕ ಪ್ರವಾಸದ ಭಾಗವಾಗಿ ಕಮಾಂಡೊ ವಿಂಗ್, ಎಂಎಲ್‌ಐಆರ್‌ಸಿ ಕೇಂದ್ರ ಮತ್ತು ರಾಜಹಂಸಗಡ ಕೋಟೆಗೆ ಭೇಟಿ ನೀಡುತ್ತಾರೆ. ಶಿಬಿರವು ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಮುಕ್ತಾಯಗೊಳ್ಳಲಿದೆ. ಇದರಲ್ಲಿ ಎಲ್ಲ ನಿರ್ದೇಶನಾಲಯಗಳ ಕೆಡೆಟ್‌ಗಳು ಪಾಲ್ಗೊಳ್ಳುತ್ತಾರೆ’ ಎಂದು ಮಾಹಿತಿ ನೀಡಿದರು.
‘ರಾಷ್ಟ್ರೀಯ ಐಕ್ಯತೆ ಉತ್ತೇಜಿಸುವುದು, ಸಾಹಸ ಮನೋಭಾವ ಬೆಳೆಸುವುದು, ಸಹಿಷ್ಣುತೆ, ತಂಡ ಮನೋಭಾವ ವೃದ್ಧಿಸುವುದು, ಪರಿಸರ ಸಮತೋಲನ ಮತ್ತು ಪ್ರಾಚೀನ ಸ್ಮಾರಕಗಳ ಬಗ್ಗೆ ಕಾಳಜಿ ಮೂಡಿಸುವುದು ಶಿಬಿರದ ಉದ್ದೇಶವಾಗಿದೆ’ ಎಂದರು.
ಕಮಾಂಡಿಂಗ್ ಅಧಿಕಾರಿ ಕರ್ನಲ್ ರಾಜೀವ್ ಖಜೂರಿಯಾ, ಆಡಳಿತಾಧಿಕಾರಿ ಕರ್ನಲ್ ಎ.ಕೆ. ವರ್ಮಾ, 26 ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ ಬೆಳಗಾವಿ ಗ್ರೂಪ್ ಕ್ಯಾಪ್ಟನ್ ಯುಡಿ ಪಾಟ್ಕರ್, ಕಮಾಂಡಿಂಗ್ ಅಧಿಕಾರಿ (8 ಕರ್ನಾಟಕ ಏರ್ ಸ್ಕ್ವಾಡ್ರನ್ ಎನ್‌ಸಿಸಿ ಬೆಳಗಾವಿ) ಕರ್ನಲ್ ಜೆ.ಪಿ. ಮಿಶ್ರಾ, ಎನ್‌ಸಿಸಿ ಬೆಳಗಾವಿಯ ಆಡಳಿತಾಧಿಕಾರಿ ಸಿ.ಬಿ. ನಂದಕುಮಾರ್ ಕೆಡೆಟ್‌ಗಳೊಂದಿಗೆ ಪಾಲ್ಗೊಂಡಿದ್ದರು.