ಹಗರಿಬೊಮ್ಮನಹಳ್ಳಿ: ರಾಷ್ಟ್ರದ ಐಕ್ಯತೆಗೆ ಧಕ್ಕೆ ತರುವಂಥಹ ಕೋಮುವಾದಿಗಳ ಶಕ್ತಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್.ಎಫ್.ಐ) ನೇತೃತ್ವದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಶುಕ್ರವಾರ ತಹಶೀಲ್ದಾರ್ ಕಚೇರಿ ಎದುರು ರಾಷ್ಟ್ರಧ್ವಜವನ್ನು ಹಿಡಿದು ಧರಣಿ ನಡೆಸಿದರು.
ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಗುಳೇದಾಳು ದೊಡ್ಡಬಸವರಾಜ ಮಾತನಾಡಿ, ವಿದ್ಯಾರ್ಥಿಗಳ ಅಭಿವೃದ್ಧಿಗಾಗಿ ಶಿಕ್ಷಣ ಸಂಸ್ಥೆಗಳು ಪೂರಕ ವಾತಾವರಣ ನಿರ್ಮಾಣ ಮಾಡುತ್ತಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಹಿಜಾಬ್ ಮತ್ತು ಕೇಸರಿ ಶಾಲುಗಳಿಂದ ಶೈಕ್ಷಣಿಕ ವಾತಾವರಣ ಹದಗೆಡುತ್ತಿದೆ. ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಕೋಮು ಪ್ರಚೋದನೆ ಶಕ್ತಿಗಳಿಗೆ ಒಳಗಾಗಿ ಶೈಕ್ಷಣಿಕ ವಾತಾವರಣವನ್ನು ಹದೆಗೆಡಲು ಬಿಡಬಾರದು ಎಂದರು.
ತ್ರಿವರ್ಣ ಧ್ವಜವನ್ನು ಹಿಡಿದುಕೊಂಡು ಹೋರಾಟ ಮಾಡುವುದರ ಮೂಲಕ ಹಿಂದೂ ಮತ್ತು ಮುಸ್ಲಿಂ ಒಂದೇ ಎನ್ನುವ ಸಂದೇಶವನ್ನು ಸಾರುತ್ತಿದ್ದೇವೆ. ಅನೇಕ ಮಹನೀಯರ ತ್ಯಾಗ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಅವರಲ್ಲಿ ಹಿಂದೂ, ಮುಸ್ಲಿಂ, ಸಿಖ್ಖರು, ಜೈನರು, ಬೌದ್ಧರಿದ್ದಾರೆ ಎಂದು ತಿಳಿಸಿದರು.
ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಸಿದ್ದನಗೌಡ ಮಾತನಾಡಿ, ರಾಜ್ಯದ ಬಹುತೇಕ ಶಾಲಾ ಕಾಲೇಜುಗಳಲ್ಲಿ ಮೂಲಸೌಕರ್ಯಗಳ ಕೊರತೆ ಇದೆ. ಗುಣಮಟ್ಟದ ಶಿಕ್ಷಣದ ಕೊರತೆ ಇದೆ. ಶಿಕ್ಷಕರು, ಉಪನ್ಯಾಸಕರು ಇಲ್ಲ, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕೊಠಡಿ, ಶೌಚಾಲಯಗಳಿಲ್ಲ. ಈ ಎಲ್ಲ ಸಮಸ್ಯೆಗಳಿದ್ದರೂ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿದ್ದನ್ನೇ ದೊಡ್ಡ ವಿಷಯವನ್ನಾಗಿ ಮಾಡಲಾಗುತ್ತಿದೆ. ಇಂಥಹ ಮನಸ್ಥಿತಿಯ ವ್ಯಕ್ತಿಗಳಿಂದ ಶೈಕ್ಷಣಿಕ ವಾತಾವರಣ ಹದಗೆಡಲು ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಶಾಂತಿ ಕದಡುವ ವಾತಾವರಣ ನಿರ್ಮಾಣವಾಗಿರುವುದಕ್ಕೆ ಗೃಹಮಂತ್ರಿಗಳ ಆಡಳಿತ ವೈಫಲ್ಯವೇ ಕಾರಣ. ಕೂಡಲೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಅಲ್ಲಿಂದ ಬಸವೇಶ್ವರ ಪುತ್ಥಳಿ ಬಳಿ ತೆರಳಿ ಘೋಷಣೆಗಳನ್ನು ಕೂಗಿದರು. ಧರಣಿ ನಡೆಸಲು ಮುಂದಾದಾಗ ಪೊಲೀಸರು ಅವಕಾಶ ನೀಡಲಿಲ್ಲ.
ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಘಟಕದ ಕಾರ್ಯದರ್ಶಿ ಬಿ.ಮಾಳಮ್ಮ, ಪ್ರಾಂತರೈತ ಸಂಘದ ಕೊಟಗಿ ಮಲ್ಲಿಕಾರ್ಜುನ, ಎಸ್‍ಎಫ್‍ಐ ತಾಲ್ಲೂಕು ಸಂಚಾಲಕ ಎಚ್.ಅಬ್ದುಲ್ ಸುಬಾನ್ ಮಾತನಾಡಿದರು. ಮುಖಂಡರಾದ ಜಿ.ಸರೋಜಾ, ಸರ್ದಾರ್ ಹುಲಿಗೆಮ್ಮ, ಶಂಷಾದ್ ಬೇಗಂ, ಬಿ.ರೇಣುಕಾ, ಕಾರ್ತೀಕ್ ಇದ್ದರು.
ಹಗರಿಬೊಮ್ಮನಹಳ್ಳಿಯಲ್ಲಿ ಎಸ್‍ಎಫ್‍ಐ ನೇತೃತ್ವದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಉಪ ತಹಶೀಲ್ದಾರ್ ವಿಶ್ವೇಶ್ವರಯ್ಯ ಅವರಿಗೆ ಮನವಿ ಸಲ್ಲಿಸಿದರು.