Saturday, December 14, 2024
Homeಸುದ್ದಿರಾಜ್ಯಓಮೈಕ್ರಾನ್ ಭೀತಿ: ಬೆಂಗಳೂರಿನಲ್ಲಿ ದಕ್ಷಿಣ ಆಫ್ರಿಕಾದ 10 ಮಂದಿ ನಾಪತ್ತೆ

ಓಮೈಕ್ರಾನ್ ಭೀತಿ: ಬೆಂಗಳೂರಿನಲ್ಲಿ ದಕ್ಷಿಣ ಆಫ್ರಿಕಾದ 10 ಮಂದಿ ನಾಪತ್ತೆ

ಬೆಂಗಳೂರು: ಓಮೈಕ್ರಾನ್‌ ಭೀತಿ ನಡುವೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಬಂದಿದ್ದ 10 ಮಂದಿ ದಕ್ಷಿಣ ಆಫ್ರಿಕಾ ಪ್ರಯಾಣಿಕರು ನಾಪತ್ತೆಯಾಗಿದ್ದಾರೆ.

ದಕ್ಷಿಣ ಆಫ್ರಿಕಾದಿಂದ ಈ ಪ್ರಯಾಣಿಕರು ನವೆಂಬರ್ 12 ಮತ್ತು 22 ರ ನಡುವೆ ಬೆಂಗಳೂರಿಗೆ ಬಂದಿದ್ದರು. ಆರೋಗ್ಯ ಇಲಾಖೆಯು ಅವರನ್ನು ಕೋವಿಡ್ ಪರೀಕ್ಷೆಗೊಳಪಡಿಸಲು ಮುಂದಾಗಿದೆಯಾದರೂ, ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ, ಅವರ ಫೋನ್‌ಗಳು ಸ್ವಿಚ್ ಆಫ್ ಅಗಿದ್ದು, ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಅವರ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದಾರೆ. 

ಈ ಕುರಿತು ಸ್ವತಃ ಆರೋಗ್ಯ ಸಚಿವ ಸುಧಾಕರ್ ಅವರೇ ಮಾಹಿತಿ ನೀಡಿದ್ದು, ನಮ್ಮ ಪೊಲೀಸ್ ವ್ಯವಸ್ಥೆ ಸಮರ್ಥವಾಗಿದೆ. ನಾಪತ್ತೆಯಾದವರ ಬಗ್ಗೆ ಶೀಘ್ರದಲ್ಲೇ ಮಾಹಿತಿ ಕಲೆಹಾಕುತ್ತೇವೆ ಎಂದು ಹೇಳಿದ್ದಾರೆ. ಇಂದು ಸುದ್ದಿಗಾರು ಕೇಳಿದ 10 ಮಂದಿ ನಾಪತ್ತೆಯಾದವರ ಕುರಿತು ಮಾತನಾಡಿದ ಅವರು, ಶೀಘ್ರದಲ್ಲೇ ನಾವು ಅವರನ್ನು ಪತ್ತೆ ಮಾಡುತ್ತೇವೆ. ನಾವು ಈ ಹಿಂದೆ ಇಂತಹ ಪರಿಸ್ಥಿತಿಗಳನ್ನು ಸಮರ್ಥವಾಗಿ ಎದುರಿಸಿದ್ದೇವೆ. ಈಗ ಇದು ನಮಗೆ ಹೊಸದೇನೂ ಅಲ್ಲ. ಈ ಹಿಂದಿನ ಪರಿಸ್ಥಿತಿಗಳಲ್ಲಿ ನಾವು ಸಾವಿರಾರು ಮಂದಿಯನ್ನು ಪತ್ತೆ ಮಾಡಿದ್ದೇವೆ. ನಮ್ಮ ಪೊಲೀಸ್ ವ್ಯವಸ್ಥೆ ಅತ್ಯಂತ ಸಮರ್ಥವಾಗಿದೆ. ಈ ಕುರಿತು ಅವರಿಗೆ ಸಾಕಷ್ಟು ಅನುಭವವಿದೆ. ಕಳೆದ ವರ್ಷ ಇಂತಹ ಸಾಕಷ್ಟು ಪ್ರಕರಣಗಳನ್ನು ಅವರು ಸಮರ್ಥವಾಗಿ ನಿಭಾಯಿಸಿದ್ದಾರೆ ಎಂದು  ಹೇಳಿದರು.

ಅಂತೆಯೇ ನಾಪತ್ತೆಯಾದವರ ಕುರಿತು ಮಾತನಾಡಿದ ಸುಧಾಕರ್ ಅವರು, ನಾನು ಈ ಮೂಲಕ ಅವರಿಗೆ ಹೇಳುವುದೇನೆಂದರೆ, ಕೋವಿಡ್ ಸಂಕಷ್ಟ ಸಂದರ್ಭದಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಿ. ಪ್ರಸ್ತುತ ನಿಮಗೆ ಹೇಗೆಂದರೆ ಹಾಗೆ ತಿರುಗಾಡಲು ಸ್ವತಂತ್ರವಿಲ್ಲ. ನೈತಿಕವಾಗಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಿ.. ಸರ್ಕಾರದ ನಿಯಮಗಳು ಒಬ್ಬರಿಗೆ ತೊಂದರೆ ಮಾಡಲು ಅಲ್ಲ. ಬದಲಿಗೆ ಒಬ್ಬರಿಂದ ಹತ್ತಾರು ಮಂದಿ ಸಂಕಷ್ಟಕ್ಕೀಡಾಗಬಾರದು. ಪಾಸಿಟಿವ್ ಬಂದಾಕ್ಷಣ ಮೊಬೈಲ್ ಸ್ವಿಚ್ ಮಾಡಿ ಹೇಗೆಂದರೆ ಹಾಗೆ ತಿರುಗಾಡುವುದು ಸರಿಯಲ್ಲ. ಇದರಿಂದ ಬೇರೆಯವರಿಗೂ ಸೋಂಕು ಹರಡುತ್ತದೆ. ಇದರಿಂದ ನಿಮ್ಮ ಹತ್ತಿರಿದವರಿಗೂ, ಸಂಬಂಧಿಕರಿಗೂ ಸೋಂಕು ತಗುಲುವ ಅಪಾಯವಿದೆ. ಇಂತಹ ನಡೆ ಸರಿಯಲ್ಲ. ದಯಮಾಡಿ ನೀವೇ ಸ್ವಯಂ ಪ್ರೇರಿತರಾಗಿ ಬಂದು ಕ್ವಾರಂಟೈನ್ ಆಗಿ ಪರೀಕ್ಷೆಗೊಳಪಡಬೇಕು ಎಂದು ಮನವಿ ಮಾಡಿದ್ದಾರೆ.

ಕೋವಿಡ್ ಚಿಕಿತ್ಸೆ ನೀಡಲಾಗದ ಸಮಸ್ಯೆ ಅಲ್ಲ. ನಮಗೆ ಅತ್ಯಂತ ಅನುಭವಿ ವೈದ್ಯರ ನೆರವಿದೆ. ಸೂಕ್ತ ಚಿಕಿತ್ಸೆಗಳು ಲಭ್ಯವಿದೆ. ಸರ್ಕಾರ ನಿಮ್ಮೊಂದಿಗೆ ನೀವಾಗಿಯೇ ಮುಂದೆ ಬಂದು ಪರೀಕ್ಷೆಗೊಳಪಡಿ ಎಂದು ಸುಧಾಕರ್ ಮನವಿ ಮಾಡಿದ್ದಾರೆ.