Saturday, December 14, 2024
Homeಸುದ್ದಿರಾಜ್ಯಕಂದು ಬಣ್ಣದ ಕುಣಿಯುವ ಕರಡಿಯ ಕಥೆ

ಕಂದು ಬಣ್ಣದ ಕುಣಿಯುವ ಕರಡಿಯ ಕಥೆ

9 ಜನರು ಮತ್ತು ಪಠ್ಯ 'DANCING BEARS TRUE STORIES OF PEOPLE NOSTALGIC FOR LIFE UNDER TYRANNY WITOLD SZABŁOWSKI "Absurd, darkly funny, compassionate literary jewel," -lan Buruma' ಹೇಳುತ್ತಿದೆ ನ ಚಿತ್ರವಾಗಿರಬಹುದು


ಬಲ್ಗೇರಿಯ ಬೀದಿಗಳಲ್ಲಿ ಕರಡಿ ಕುಣಿಸುವವರು ತುಂಬಾ ಮಂದಿಯಿದ್ದರು. ಈ ಕಂದು ಬಣ್ಣದ ಕರಡಿಗಳದ್ದು ತೀರ unpredictable ಸ್ವಭಾವಂತೆ. ಕೋಪ ಬಂದಾಗ ಮೇಲೆರಗಿ ಸಿಗಿದು ಹಾಕಿಬಿಡುವಷ್ಟು ದೈತ್ಯ ಪ್ರಾಣಿಗಳಿವಂತೆ. ಆದರೆ ಇಂತಹ ವೈಲ್ಡ್ ಕರಡಿಗಳನ್ನೂ ಪಳಗಿಸಿ ಬೀದಿ ಬೀದಿಗಳಲ್ಲಿ ಕುಣಿಸಿ ಹಣ ಕಮಾಯಿಸುವುದಾದರು ಹೇಗೆ?


ಬಲ್ಗೇರಿಯದ ಕಂದು ಬಣ್ಣದ ಕರಡಿಗಳಿಗೆ ಕುಣಿಯುವುದನ್ನ ಹೇಳಿಕೊಡಲಾಗುತ್ತಿತ್ತು. ತರಬೇತಿ ಸಮಯದಲ್ಲಿ ಕ್ರೌರ್ಯ, ಹಿಂಸೆಯ ಉಪಯೋಗ ಸರ್ವೇ ಸಾಮಾನ್ಯವಾಗಿತ್ತು. ಅವುಗಳನ್ನ ಕೂಡಿ ಹಾಕಲಾಗುತ್ತಿತ್ತು. ಉಪವಾಸ ಕೆಡವಲಾಗುತ್ತಿತ್ತು. ಮರಿಗಳಿದ್ದಾಗಲೇ ಹಿಡಿದು ತಂದು ಬೆತ್ತದಿಂದ ಬಾರಿಸಿ ಕುಣಿಯುವುದನ್ನ ಹೇಳಿಕೊಡಲಾಗುತ್ತಿತ್ತು. ಇದ್ದಕಿದ್ದ ಹಾಗೆ ಕರಡಿಗಳಿಗೆ “ನಾನು ನನ್ನ ಒಡೆಯನಿಗಿಂತ ದೈತ್ಯನು, ಬಲಿಷ್ಠನು” ಎಂದು ನೆನೆಪಾಗಿ ಮಾರಣಾoತಿಕವಾಗಿ ಹಲ್ಲೆ ಮಾಡಬಾರದೆಂದು ಅವುಗಳ ಹಲ್ಲುಗಳನ್ನ ಕೀಳಲಾಗುತ್ತಿತ್ತು. ಅವುಗಳ ಪ್ರಾಣಿ ಸಹಜ ಚೈತನ್ಯ, ಹುರುಪನ್ನ ಹಂತ ಹಂತವಾಗಿ ಮುರಿಯಲಾಗುತ್ತಿತ್ತು. ಹೆಂಡ ಕುಡಿಸಲಾಗುತ್ತಿತ್ತು. ಮದ್ಯಯ ಮತ್ತಿನಲ್ಲೇ ಮುಳುಗಿ ಹೋಗುವಂತೆ ಮಾಡಲಾಗುತ್ತಿತ್ತು. ಹೀಗೆಲ್ಲ ಮಾಡಿದ ನಂತರ ಪ್ರವಾಸಿಗಳ ಮುಂದೆ ಕರೆದುಕೊಂಡು ಬಂದು ಕುಣಿಯುವಂತೆ ಅದೇಶಿಸಲಾಗತ್ತಿತ್ತು. ಬಲಿಷ್ಠ ಕಂದು ಕರಡಿ ಒಡೆಯನ ಇಶಾರೆಗೆ ಅನುಗುಣವಾಗಿ ಕುಣಿಯತ್ತಿತ್ತು, ಖ್ಯಾತ ನಟರ ಅನುಕರಣೆ ಮಾಡತ್ತಿತ್ತು!!!!


ಆದರೆ 2007ರಲ್ಲಿ ಬಲ್ಗೇರಿಯ ಯುರೋಪಿಯನ್ ಒಕ್ಕೂಟ ಸೇರಿಕೊಂಡಿತು. ಅಂದಿನಿಂದ ಕರಡಿಗಳನ್ನ ಇಟ್ಟುಕೊಳ್ಳುವುದೇ ಕಾನೂನುಬಾಹಿರವಾಯಿತು. ಕರಡಿ ಕುಣಿತದ ಮೇಲೆ ನಿಷೇಧ ಹೇರಲಾಯಿತು. ಆಸ್ಟ್ರಿಯಾದ ಸಂಸ್ಥೆ ಬೆಲಿಸ್ತ ಎಂಬ ಜಾಗದಲ್ಲಿ ಬಿಡುಗಡೆವೊಂದಿದ ಕರಡಿಗಳ ಹಾರೈಕೆ ಮತ್ತು ಪುನಶ್ಚೈತನ್ಯಕ್ಕಾಗಿ ಪಾರ್ಕವೊಂದನ್ನು ತೆರೆಯಿತು. ದೇಶಾದ್ಯಂತ ಒಂದೊಂದೇ ಕರಡಿಗಳನ್ನ ರೆಸ್ಕ್ಯೂ ಮಾಡಿ ಅಲ್ಲಿಗೆ ತರಲಾಯಿತು. ಬೆತ್ತದೇಟು, ಕ್ರೌರ್ಯ, ಹಿಂಸೆ, ಮೂಗಿಗೆ ತೊಡಿಸಿದ ಬಳೆಗಳೆಲ್ಲವೂ ನಿಧಾನವಾಗಿ ಮಾಯವಾದವು. ಬಂಧಮುಕ್ತವಾದ ಕಂದು ಬಣ್ಣದ ಕರಡಿಗಳಿಗೆ ವಿಶಿಷ್ಟವಾದ ಯೋಜನೆ ಶುರುವಾಯಿತು. ಸ್ವಾತಂತ್ರ್ಯವನ್ನೇ ಕಂಡಿರದ ಕರಡಿಗಳಿಗೆ ಹಂತ ಹಂತವಾಗಿ, ಕೊಂಚ ಕೊಂಚ, ಎಚ್ಚರಿಕೆಯಿಂದ ಸ್ವಾತಂತ್ರ್ಯವನ್ನ ಪರಿಚಯಿಸಲಾಯಿತು.


ಕಾಡಿನಲ್ಲಿರುವ ಕರಡಿ ಹೇಗೆ ಸ್ವತಂತ್ರವಾಗಿ ಓಡಾಡಿಕೊಂಡಿರುತ್ತದೆ, ಹೇಗೆ ಸುಪ್ತ ಸ್ಥಿತಿಯಲ್ಲಿರುತ್ತದೆ (ಹೈಬರ್ನೇಟ್), ಅವು ಹೇಗೆ ಸಂಭೋಗಿಸುತ್ತವೆ, ಆಹಾರ ಹೇಗೆ ಹುಡುಕುತ್ತವೆ ಎಂಬುದನ್ನ ಹೇಳಿಕೊಡುತ್ತಾ ಬೆಲಿಸ್ತ ಪಾರ್ಕ್ ಸ್ವಾತಂತ್ರ್ಯ ಸಂಶೋಧನಾ ಪ್ರಯೋಗಾಲಯವಾಗಿ ಬಿಟ್ಟಿತು.
ಈ ಕಂದು ಬಣ್ಣದ ಕುಣಿಯುವ ಕರಡಿಗಳ ಪಾರ್ಕಿಗೆ ಹೋದ ಸಂಶೋಧಕರು ಗಮನಿಸಿದ್ದು ಈ ಕೆಳಕಂಡಂತ್ತಿತ್ತು


• ಕರಡಿಗಳಿಗೆ ಸ್ವಾತಂತ್ರ್ಯವನ್ನ ಒಮ್ಮೆಲೆಗೆ ಕೊಡದೆ, ಸಣ್ಣ ಸಣ್ಣ ಡೋಸ್ಗಳಲ್ಲಿ ಕೊಡಲಾಯಿತು. ಸಂಪೂರ್ಣ ಸ್ವಾಂತಂತ್ರ್ಯವನ್ನ ಒಮ್ಮೆಲೆಗೆ ಕೊಟ್ಟಿದ್ದೆ ಆದರೆ ಅವು ಉಸಿರುಕಟ್ಟಿ ಸಾಯುವ ಅಥವಾ ಹುಚ್ಚೆದ್ದು ಎಲ್ಲರ ಮೇಲೆ ಎರಗುವ ಅಪಾಯವಿತ್ತು.

• ಈ ಕ್ಯಾಪ್ಟಿವ್ ಕರಡಿಗಳಿಗೆ ಕೊಡಬಹುದಾಗಿದ್ದ ಸ್ವಾತಂತ್ರ್ಯಕ್ಕೂ ಮಿತಿಯಿತ್ತು.


• ಸ್ವಾತಂತ್ರ್ಯವನ್ನೇ ಕಂಡಿರದ, ಅದರ ರುಚಿಯನ್ನೇ ನೋಡಿರದ ಈ ಕರಡಿಗಳಿಗೆ ಸ್ವಾತಂತ್ರ್ಯವೆಂಬುದು ತುಂಬಾ ಜಟಿಲವಾದ ವಿಷಯವಾಗಿತ್ತು. ತಮ್ಮಷ್ಟಕ್ಕೆ ತಾವು ಬದುಕುಬೇಕಾದ ಹೊಸ ಸನ್ನಿವೇಶಕ್ಕೆ ಹೊಂದಿಕೊಳ್ಳುವುದೇ ಕರಡಿಗಳಿಗೆ ಕಷ್ಟವಾಯಿತು. ಆದೇಶ, ಬೆತ್ತದೇಟು, ಹಿಂಸೆಗಳಿಲ್ಲದ ದಿನಗಳನ್ನ ಕಳೆಯುವುದೇ ಕಠಿಣವೆನಿಸಿತು. ಹಲವು ಕರಡಿಗಳಿಗೆ ಈ ಹೊಸ ಜೀವನ ಸರಿಬಾರದೆ ಸತ್ತೆ ಹೋದವು.


• ಇನ್ನು ಕೆಲವು ಕರಡಿಗಳಿಗೆ ಈ ಸ್ವಾತಂತ್ರ್ಯವೇ ಅತೀವ ನೋವಾಗಿ ಪರಿಣಮಿಸಿತು. ಆಗ ಈ ಕರಡಿಗಳು ಏನು ಮಾಡಿದವು ಗೊತ್ತೆ? ತಮ್ಮ ಎರಡು ಕಾಲುಗಳನ್ನ ಮೇಲಕೆತ್ತಿ ಕುಣಿಯ ತೊಡಗಿದವು. ಪಾರ್ಕ್ ಸಿಬ್ಬಂದಿ ಯಾವುದನ್ನ ಬಿಡಿಸಲು, ಮರೆಸಲು ಹರಸಾಹಸ ಪಡುತ್ತಿದ್ದರೋ ಅದನ್ನೇ ಕರಡಿಗಳು ಮಾಡತೊಡಗಿದವು!!!!


ಅವು ಒಡೆಯನ ಆದೇಶವನ್ನ ಕಲ್ಪಿಸಿಕೊಂಡು ಕುಣಿಯತೊಡಗಿದ್ದವು. ಕರಡಿಗಳಿಗೆ ಪ್ರಾಣಿಗಳಂತೆ ಸಹಜವಾಗಿ, ಸ್ವಚಂದವಾಗಿರಲು ಸಾಧ್ಯವಾಗಲಿಲ್ಲ. ಒಡೆಯ ಬಂದು ಈ ಸ್ವಾಂತಂತ್ರ್ಯದ ಸಂಕೋಲೆಯಿಂದ ಮುಕ್ತಿಗೊಳಿಸಿ ಮತ್ತೆ ಬಂಧಿಸಿಬಿಡಲಿ ಎಂಬ ಬಯಕೆ ಅವಕ್ಕೆ. “ಈ ಸ್ವಾಂತಂತ್ರ್ಯ ಅನ್ನೋದು ತುಂಬ ಜವಾಬ್ದಾರಿಯುತವಾದುದು. ಒಡೆಯ ಬೇಕಾದರೆ ಹೊಡೆದು ಬಿಡಲಿ, ಹಿಂಸಿಸಲಿ, ಹೇಗೆ ಬೇಕಾದರೂ ನಡೆಸಿಕೊಳ್ಳಲಿ ಆದರೆ ನಮ್ಮ ಜೀವನದ ಹೊರೆ ನಾವೇ ಹೊರುವ ಜವಾಬ್ದಾರಿಯಂತೂ ಬೇಡವೇ ಬೇಡ. ಸಾಕು ಸಾಕಾಗಿದೆ ಈ ಸ್ವಾತಂತ್ರ್ಯ!!!! ಎಂಬಂತೆ ಕರಡಿಗಳು ವರ್ತಿಸತೊಡಗಿದ್ದವು.
ಸ್ವಾತಂತ್ರ್ಯ ಬರಿಯ ಹೊಸ ಅವಕಾಶಗಳನ್ನ, ಹೊಸ ಸಮತಲಗಳನ್ನ ನಮ್ಮ ಮುಂದೆ ತೆರೆದಿಡದೆ, ಹೊಸ ಸವಾಲುಗಳನ್ನೂ ನಮ್ಮ ಮುಂದೆ ಹಾಸಿಬಿಡುತ್ತದೆ. ಸ್ವಾತಂತ್ರ್ಯವನ್ನೇ ನೋಡಿರದ, ಆದರ ಫಲದ ರುಚಿ ನೋಡಿರದವರಿಗೆ, ಸ್ವಾತಂತ್ರ್ಯ ಒಂದು ಹೊರಲಾರದ ಹೊರೆ. ಯಾರಿಗೋ ಅಧೀನನಾಗಿ, ಆದೇಶ ಪಾಲಿಸುತ್ತಾ ಬದುಕಿಬಿಡುವುದು ಸುಲಭ ಆದರೆ ತನ್ನ ಬದುಕನ್ನ ತನ್ನಿಚ್ಚೆಯಂತೆ ಕಟ್ಟಿಕೊಳ್ಳುವುದು ಒಂದು ಸವಾಲೇ ಸರಿ.


ಶತಕಗಳ ಕಾಲ ಬೇರೆ ದೇಶಗಳ ಅಧೀನದಲ್ಲಿದ್ದು, ವಸಾಹತುಗಳಾಗಿದ್ದ ದೇಶಗಳಿಗೆ ಸ್ವಾತಂತ್ರ್ಯ ಸಿಕ್ಕಿದ ನಂತರ, ಆ ಸ್ವಾತಂತ್ರ್ಯವೇ ದೊಡ್ಡ ಸವಾಲಾಗಿದ್ದು ಆಶ್ಚರ್ಯವೇನಲ್ಲ. ಇಂದಿಗೂ ಈ ದೇಶಗಳು, ಮತ್ತಲ್ಲಿನ ಜನತೆ ಆದೇಶ ನೀಡುವ ಸರ್ವಾಧಿಕಾರಿಗಾಗಿ ಕಾಯತೊಡಗುತ್ತದೆ, ಆ ದೇಶ ಆತನನ್ನು ಸೇವಿಯರ್ ಎಂದು ಪರಿಗಣಿಸುತ್ತದೆ. (ಉದಾಹರಣೆಗೆ ಬ್ರಿಟಿಷರಿಂದ ಮುಕ್ತಿ ಪಡೆದ ನಂತರ ಸ್ವಾತಂತ್ರ್ಯದ ಹೊರೆ ಹೊರಲಾರದೆ ಇದಿ ಅಮೀನ್ ನಂತಹ ರಾಕ್ಷಸನನ್ನ ಸೇವಿಯರ್ ಎಂದು ದಾರಿ ಸುಗಮ ಮಾಡಿಕೊಟ್ಟ ಉಗಾಂಡಾ ದೇಶದ ಜನತೆ) ಇಂತಹ ದೇಶ ಸುಳ್ಳು ಆಶ್ವಾಸನೆಗಳ ಮೇಲೆ ಬದುಕಿಬಿಡುವ ಗುಣವನ್ನ ರೂಢಿಮಾಡಿಕೊಂಡುಬಿಡುತ್ತದೆ. ಕೆಟ್ಟ ಆಡಳಿತದಿಂದ ದೇಶವನ್ನೇ ಅರಾಜಕತೆಗೆ ತಳ್ಳಿಬಿಟ್ಟರು, ನಿಶ್ಚಿಂತೆಯಿಂದ ಬದುಕಿಬಿಡುತ್ತದೆ. ಕಣ್ಣು ಮುಚ್ಚಿ ಜೈಕಾರ ಹಾಕುವುದು, ಪ್ರಶ್ನಿಸದೆ ನಾಯಕರನ್ನ ಒಡೆಯ ಎಂದು ಒಪ್ಪಿಕೊಳ್ಳುವುದು, ಅವರೆಲ್ಲಾ ಮೂರ್ಕ ನಡೆಗಳನ್ನ ಸಮರ್ಥಿಸಿಕೊಳ್ಳುವುದು, ಕೊನೆಗೆ ವ್ಯಕ್ತಿ ಸ್ವಾಂತಂತ್ರ್ಯವನ್ನ ಆತನ ಪಾದಕಿಟ್ಟು ಮಂದೆಯಲ್ಲಿ ಒಂದಾಗುವುದು, ಅಧೀನಾಗುವುದು ಬಲ್ಗೇರಿಯದ ಕಂದು ಬಣ್ಣದ ಕುಣಿಯುವ ಕರಡಿಯ ಗುಣವೇ ಅಲ್ಲವೇ !!!!

Few may fight for freedom, but people, at large, are nostalgic about life under tyranny….

  • ಹರೀಶ್‌ ಗಂಗಾಧರ್