Saturday, December 14, 2024
Homeಕಲ್ಯಾಣ ಕರ್ನಾಟಕಕಲಬುರ್ಗಿಕಚೇರಿಯಲ್ಲಿ 1.5 ಲಕ್ಷ ಲಂಚ ಪಡೆಯುತ್ತಿದ್ದ ನಾಗರಾಜ ಜಲಮಂಡಳಿ ಮುಖ್ಯ ಎಂಜಿನಿಯರ್ ಎಸಿಬಿ ಬಲೆಗೆ

ಕಚೇರಿಯಲ್ಲಿ 1.5 ಲಕ್ಷ ಲಂಚ ಪಡೆಯುತ್ತಿದ್ದ ನಾಗರಾಜ ಜಲಮಂಡಳಿ ಮುಖ್ಯ ಎಂಜಿನಿಯರ್ ಎಸಿಬಿ ಬಲೆಗೆ

ಕಲಬುರ್ಗಿ: ನಗರದ ಟೌನ್‌ಶಿಪ್‌ ಒಂದರಲ್ಲಿ ಕುಡಿಯುವ ನೀರು ಒಳಚರಂಡಿ ಕಾರ್ಯಕ್ಕೆ ಸಂಬಂಧಿಸಿದ ಅನುಮತಿ ನೀಡಲು 2 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟು, 1.5 ಲಕ್ಷ ರೂಪಾಯಿ ಪಡೆಯುತ್ತಿದ್ದ ಕರ್ನಾಟಕ ನಗರದ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವಿಭಾಗೀಯ ಕಚೇರಿಯ ಮುಖ್ಯ ಎಂಜಿನಿಯರ್ ನಾಗರಾಜ ಅವರನ್ನು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ.

ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಮಂಡಳಿಯ ಮುಖ್ಯ ಎಂಜಿನಿಯರ್ ಅವರ ಬಳಿ ಬಂದಿದ್ದ ಕಲಬುರ್ಗಿಯ ಯಶಸ್ವಿ ಟೌನ್‌ಶಿಪ್‌ ವ್ಯವಸ್ಥಾಪಕ ನಿರ್ದೇಶಕ ಅಣ್ಣಾಸಾಹೇಬ ಪಾಟೀಲ ಅವರು ಟೌನ್‌ಶಿಪ್‌ನಲ್ಲಿನ ಮಂಡಳಿಯ ಕಾಮಗಾರಿಗಳಿಗೆ ಅನುಮೋದನೆ ನೀಡಲು ಅರ್ಜಿ ಸಲ್ಲಿಸಿದ್ದರು. ಹಲವು ದಿನಗಳಿಂದ ಅರ್ಜಿಯನ್ನು ವಿಲೇವಾರಿ ಮಾಡದ ನಾಗರಾಜ ಅವರು 2 ಲಕ್ಷ ಲಂಚ ನೀಡಿದರೆ ಅನುಮೋದನೆ ನೀಡುವುದಾಗಿ ತಿಳಿಸಿದ್ದರು. ಇದರಿಂದ ಬೇಸತ್ತ ಅಣ್ಣಾಸಾಹೇಬ ಅವರು ಎಸಿಬಿ ಎಸ್ಪಿ ಮಹೇಶ ಮೇಘಣ್ಣವರ ಅವರಿಗೆ ದೂರು ನೀಡಿದ್ದರು.

ದೂರನ್ನು ಆಧರಿಸಿ ಕಾರ್ಯಾಚರಣೆ ನಡೆಸಿದ ಮೇಘಣ್ಣವರ ಅವರಿದ್ದ ಎಸಿಬಿ ಅಧಿಕಾರಿಗಳ ತಂಡವು ಕಚೇರಿಯಲ್ಲಿ ನಾಗರಾಜ ಅವರು ಲಂಚದ ಹಣ ಪಡೆಯುತ್ತಿದ್ದ ವೇಳೆ ದಾಳಿ ನಡೆಸಿತು. ಬಳಿಕ ಅವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಎಸಿಬಿ ಡಿವೈಎಸ್ಪಿ ವೀರೇಶ ಕರಡಿಗುಡ್ಡ ತಿಳಿಸಿದರು.