ದಾವಣಗೆರೆ: ಶಾಸಕ ಶಾಮನೂರು ಶಿವಶಂಕರಪ್ಪ ಅವರ ಪುತ್ರ ಎಸ್.ಎಸ್.ಗಣೇಶ ಮಾಲೀಕತ್ವದ, ತಾಲ್ಲೂಕಿನ ಕುಕ್ಕವಾಡದಲ್ಲಿ ನಿರ್ಮಾಣ ಹಂತದ ಎಥೆನಾಲ್ ಘಟಕದ ಕಟ್ಟಡದ ಪಿಲ್ಲರ್ ಗುರುವಾರ ಕುಸಿದು ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ.
ರಾಯಚೂರು ಜಿಲ್ಲೆಯ ಮಾನಪ್ಪ (35), ಬಸಪ್ಪ (40), ಪಶ್ಚಿಮ ಬಂಗಾಳದ ಮಜೀದ್ (34) ಮೃತಪಟ್ಟವರು. ಅಂಬರೀಷ್, ರಮೇಶ್, ಸಂತೋಷ್, ಮಿನಲ್ ಸೇರು ಐವರನ್ನು ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಕ್ಕರೆ ಕಾರ್ಖಾನೆಯ ಬಳಿ ಎಥೆನಾಲ್ ಘಟಕಕ್ಕೆ ಸಂಬಂಧಿಸಿದ ಕಟ್ಟಡ ನಿರ್ಮಿಸಲಾಗುತ್ತಿದ್ದು, ಗುರುವಾರ ಕಾಂಕ್ರೀಟ್ ಹಾಕುತ್ತಿದ್ದಾಗ ಅವಘಡ ಸಂಭವಿಸಿದೆ.
ರಜೆಯಲ್ಲಿ ಕೆಲಸ ಮಾಡಿದರೆ ಒಟಿ (ಓವರ್‌ಟೈಮ್) ಸಿಗುತ್ತದೆ ಎಂದು ಹಬ್ಬ ಮಾಡಲು ಊರಿಗೂ ಹೋಗದೇ ದುಡಿಮೆಗೆ ನಿಂತ ಜೀವಗಳು ಕಟ್ಟಡದ ಪಿಲ್ಲರ್ ಕುಸಿದು ಬಿದ್ದು ಬಾರದ ಲೋಕಕ್ಕೆ ಹೋಗಿವೆ. ಈ ಕಾರ್ಮಿಕರ ಕುಟುಂಬಗಳಿಗೆ ದೀಪಾವಳಿ ಬೆಳಕಿನ ಹಬ್ಬವಾಗದೇ ಭವಿಷ್ಯಕ್ಕೆ ಕತ್ತಲು ಕವಿದು ಕಣ್ಣೀರಿಡುವ ದಿನವಾಗಿದೆ.
ಈ ಎಥೆನಾಲ್ ಘಟಕದಲ್ಲಿ ರಾಯಚೂರು, ಕಲಬುರಗಿ, ಕೊಪ್ಪಳ ಸಹಿತ ಬೇರೆ ಬೇರೆ ಜಿಲ್ಲೆಯವರು ಮತ್ತು ಪಶ್ಚಿಮ ಬಂಗಾಳದ ಕಾರ್ಮಿಕರು ಇದ್ದಾರೆ. ಈ ಕಾರ್ಮಿಕರಿಗೆ ಕುಕ್ಕವಾಡದಲ್ಲಿಯೇ ತಾತ್ಕಾಲಿಕ ಟೆಂಟ್ ಹಾಕಿ ಕೊಡಲಾಗಿದೆ. ಬಹುತೇಕ ಕಾರ್ಮಿಕರು ಕುಟುಂಬ ಸಹಿತ ಇಲ್ಲಿ ವಾಸವಾಗಿದ್ದಾರೆ.
ದೀಪಾವಳಿಗೆ ಬಹುತೇಕ ಕಾರ್ಮಿಕರು ಊರಿಗೆ ಹೋಗಿದ್ದರೆ ಎಥೆನಾಲ್ ಘಟಕದ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿರುವವರು ಹೋಗಿರಲಿಲ್ಲ. ರಜೆ ದಿನದಲ್ಲಿ ಹೆಚ್ಚುವರಿಯಾಗಿ ಒಟಿ ವೇತನ ಸಿಗುವುದರಿಂದ ಕೆಲಸ ಹಬ್ಬ ಮರೆತು ಕೆಲಸ ಮಾಡುತ್ತಿದ್ದರು. ಪಿಲ್ಲರ್ ನಿರ್ಮಾಣಗೊಂಡು ಅದರ ಮೇಲೆ ಕಾಂಕ್ಟಿಟ್ ಹಾಕುವ ಕೆಲಸ ಗುರುವಾರ ನಡೆಯುತ್ತಿತ್ತು. ಸುಮಾರು 15 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ಒಂದು ಪಿಲ್ಲರ್ ಕುಸಿದ ನಿರ್ಮಾಣಹಂತದ ಚಾವಣಿಯೇ ಕೆಳಗೆ ಬಿದ್ದಿದೆ.
15 ಮಂದಿ ಕಾರ್ಮಿಕರ ಇದರ ನಡುವೆ ಸಿಲುಕಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಅಡಿಯಲ್ಲಿ ಸಿಲುಕಿದವರನ್ನು ಹೊರತೆಗೆದಿದ್ದಾರೆ. ರಾಯಚೂರಿನ ಮಾನಪ್ಪ ಮತ್ತು ಬಸಪ್ಪ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಪಶ್ಚಿಮ ಬಂಗಾಳದ ಮಜೀದ್ ಆಸ್ಪತ್ರೆಗೆ ಸಾಗಿಸುತ್ತಿರುವಾಗ ಅಸುನೀಗಿದರು. ಅಂಬರೀಶ್, ರಮೇಶ್, ಸಂತೋಷ್, ಕೋಲ್ಕತದ ಮಿನಾಲ್ ಸಹಿತ ಐವರ ಸ್ಥಿತಿ ಗಂಭೀರವಾಗಿದೆ. ಉಳಿದವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹಬ್ಬಕ್ಕೆ ರಜೆ ಮಾಡಿ ಊರಿಗೆ ಹೋಗಿ ಎಂದು ಸಾಹೆಬ್ರು ಹೇಳಿದರೂ ಹೋಗದೇ ನಿಂತಿದ್ದರು. ಹಬ್ಬಕ್ಕೆ ತೆರಳಿದ್ದರೆ ಪ್ರಾಣ ಉಳಿಯುತ್ತಿತ್ತು ಎಂದು ಘಟಕ ನಿರ್ಮಾಣದ ಉಸ್ತುವಾರಿ ಈಶಣ್ಣ ತಿಳಿಸಿದ್ದಾರೆ.
ಮೃತಪಟ್ಟವರ ಕುಟುಂಬಕ್ಕೆ ಮತ್ತು ಗಾಯಾಳುಗಳಿಗೆ ಪರಿಹಾರ ನೀಡಲು ಗುತ್ತಿಗೆದಾರರ ಜತೆಗೆ ಚರ್ಚೆ ಮಾಡಿ ಕ್ರಮ ಕೈಗೊಳ್ಳುವುದಾಗಿ ಎಥೆನಾಲ್ ಘಟಕದ ಮಾಲೀಕ ಎಸ್.ಎಸ್. ಗಣೇಶ್ ತಿಳಿಸಿದ್ದಾರೆ.