ಜೈಪುರ: ಹೊಸದಾಗಿ ನೇಮಕಗೊಂಡ ರಾಜಸ್ಥಾನ ಸಚಿವ ರಾಜೇಂದ್ರ ಸಿಂಗ್ ಗುಢಾ ಅವರು ರಾಜ್ಯದ ರಸ್ತೆಗಳನ್ನು ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರ ಕೆನ್ನೆಗೆ ಹೋಲಿಸಿದ್ದಾರೆ. ಈ ಹೇಳಿಕೆ ವೈರಲ್ ಆಗಿ ವಿವಾದಕ್ಕೆ ಕಾರಣವಾಗಿದೆ.
ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋದಲ್ಲಿ, ಸಚಿವರು ತಮ್ಮ ವಿಧಾನಸಭಾ ಕ್ಷೇತ್ರವಾದ ಉದಯಪುರವತಿಯಲ್ಲಿ ಜನರೊಂದಿಗೆ ಸಂವಹನ ನಡೆಸುತ್ತಿದ್ದಾಗ ಈ ಭಾಗದ ರಸ್ತೆಗಳನ್ನು ದುರಸ್ತಿಪಡಿಸುವಂತೆ ಆಗ್ರಹಿಸಿದ್ದಾರೆ.
ಈ ವೇಳೆ ಸಚಿವರು ಸಭೆಯಲ್ಲಿದ್ದ ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್ ಕಡೆಗೆ ತಿರುಗಿ, ‘ನನ್ನ ಕ್ಷೇತ್ರದಲ್ಲಿ ಕತ್ರಿನಾ ಕೈಫ್ ಅವರ ಕೆನ್ನೆಯಂತಹ ರಸ್ತೆ ಮಾಡಬೇಕು’ ಎಂದು ತಮಾಷೆಯಾಗಿ ಹೇಳಿದ್ದಾರೆ. ಬಳಿಕ ಮತ್ತೊಮ್ಮೆ ಗುಢಾ ತಮ್ಮ ಮತದಾರರ ಹೆಚ್ಚಿನ ಮೆಚ್ಚುಗೆಯನ್ನು ಪಡೆಯಲು ಹೇಳಿಕೆಯನ್ನು ಪುನರಾವರ್ತಿಸಿದ್ದಾರೆ.
ರಾಜಕಾರಣಿಗಳು ರಸ್ತೆಗಳನ್ನು ನಟಿಯರ ಕೆನ್ನೆಗೆ ಹೋಲಿಸುವುದು ಹೊಸದೇನಲ್ಲ. 2005 ರಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಬಿಹಾರದ ರಸ್ತೆಗಳನ್ನು ಹೇಮಾ ಮಾಲಿನಿ ಅವರ ಕೆನ್ನೆಯಂತೆ ನುಣುಪಾಗಿ ಮಾಡುವ ಭರವಸೆ ನೀಡಿದಾಗ ಗದ್ದಲ ಉಂಟಾಗಿತ್ತು.
ಮಧ್ಯ ಪ್ರದೇಶದ ಕಾನೂನು ಸಚಿವ ಪಿಸಿ ಶರ್ಮಾ ಅವರು 2019 ರಲ್ಲಿ ರಾಜ್ಯದ ಹೊಂಡಗಳಿಂದ ಕೂಡಿದ ರಸ್ತೆಗಳನ್ನು ‘ಡ್ರೀಮ್ ಗರ್ಲ್’ ಸ್ಟಾರ್‌ನ ಕೆನ್ನೆಯಂತೆ “ಸುಂದರ” ಗೊಳಿಸಲಾಗುವುದು ಎಂದು ಹೇಳಿದ್ದರು.