ರಾಮನಗರ: ಜನಪದ ಕಲಾವಿದರು ಕಲೆಯ ಬೆನ್ನು ಹತ್ತಬೇಕೆ ಹೊರತು ಹಣ, ಪ್ರಶಸ್ತಿ ಹಿಂದೆ ಬೀಳಬಾರದು ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಸಲಹೆ ನೀಡಿದರು.
ಇಲ್ಲಿನ ಜಾನಪದ ಲೋಕದ ಆವರಣದಲ್ಲಿ ಶನಿವಾರ ಜಾನಪದ ಲೋಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಪ್ಪತ್ತು ವರ್ಷದ ಹಿಂದೆ ಇಂತಹದ್ದೇ ಕಾರ್ಯಕ್ರಮದಲ್ಲಿ ವೇದಿಕೆಯ ಹಿಂದೆ ಕೂರುತ್ತಿದ್ದೆ. ಅವತ್ತಿಗೆ ತೃತೀಯ ಲಿಂಗಿಗಳಿಗೆ ಅವಕಾಶಗಳೇ ಇರಲಿಲ್ಲ. ಅಂತಹ ವ್ಯಕ್ತಿಯೊಬ್ಬಳಿಗೆ ಇಂದು ಅಕಾಡೆಮಿ ಅಧ್ಯಕ್ಷೆ ಹುದ್ದೆಯ ಅವಕಾಶ ಒದಗಿಬರಲು ನಾಗೇಗೌಡರಂತಹವರ ಶ್ರಮ ಕಾರಣ ಎಂದರು.
ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ ಟಿ. ತಿಮ್ಮೇಗೌಡ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ತು ಸದಸ್ಯ ಸಿ.ಎಂ. ಲಿಂಗಪ್ಪ, ಕೃಪಾನಂದನಾಥ ಸ್ವಾಮೀಜಿ, ಜನಪದ ಗಾಯಕ ಬಾನಂದೂರು ಕೆಂಪಯ್ಯ, ಜಾನಪದ ಪರಿಷತ್ತು ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್ ವೇದಿಕೆಯಲ್ಲಿ ಇದ್ದರು.
ಎರಡು ದಿನ ಕಾಲ ನಡೆಯಲಿರುವ ಲೋಕೋತ್ಸವದಲ್ಲಿ ರಾಜ್ಯ- ಹೊರ ರಾಜ್ಯಗಳ ಕಲಾವಿದರು ಪಾಲ್ಗೊಂಡಿದ್ದಾರೆ. ವಿವಿಧ ಜನಪದ ಕಲಾ ಪ್ರದರ್ಶನಗಳು ನಡೆಯಲಿವೆ. ಕರಕುಶಲ ಮೇಳವನ್ನೂ ಆಯೋಜಿಸಲಾಗಿದೆ. ಭಾನುವಾರ ಸಂಜೆ ಇಲ್ಲಿನ ಬಯಲು ರಂಗಮಂದಿರದಲ್ಲಿ ಕಲಾವಿದರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.