ಸುಮ್ಮನೆ ರಸ್ತೆಯಲ್ಲಿ ನಡೆಯುತ್ತಿದ್ದೆ. ಪಕ್ಕದ ಶಾಲೆಯಯಿಂದ ಏನೋ ಗೌಜುಗದ್ದಲ ಕೇಳುತ್ತಿತ್ತು. ಏನೋ ಕಾರ್ಯಕ್ರಮ ಇದ್ದ ಹಾಗಿದೆ. ಸ್ವಲ್ಪ ಹೊತ್ತು ನೋಡಿ, ಕೇಳಿ ಹೋಗೋಣ ಎಂದು ಅತ್ತ ಹೋದೆ. ಅಲ್ಲಿ ನೋಡಿದರೆ ಕವಿಗೋಷ್ಠಿ ಎಂದು ದೊಡ್ಡ ಬ್ಯಾನರ್ ಹಾಕಲಾಗಿತ್ತು. ನಾನೂ ಕವಿಯಾಗಬೇಕು ಎಂದು ಯಾವಾಗಲು ಮನಸ್ಸು ಹೇಳುತ್ತಿತ್ತು. ಇಂಥ ಕವಿಗೋಷ್ಠಿಯಲ್ಲಿ ಪ್ರೇಕ್ಷಕನಾಗಿ ಭಾಗವಹಿಸಿ ಕವಿತೆಗಳನ್ನು ಕೇಳಿ ದೊಡ್ಡ ಕವಿಯಾಗುವ ಸಾಧ್ಯತೆ ಇದೆ ಎಂದು ಆಗಾಗ ಅನ್ನಿಸಿದ್ದೂ ಇದೆ. ಮತ್ಯಾಕೆ ಸುಮ್ಮನಿರುವುದು ಎಂದು ಕುಳಿತೆ.
ಯಾರೋ ಬಂದರು ಹಲವರನ್ನು ವೇದಿಕೆಗೆ ಕರೆದರು, ಸ್ವಾಗತಿಸಿದರು, ಕೊರೆದರು. ಯಾವುದು ಕೂಡ ನನ್ನನ್ನು ಅಲುಗಾಡಿಸಲು ಆಗಲಿಲ್ಲ. ಕವಿಗೋಷ್ಠಿಯಲ್ಲಿ ಕವಿಗಳು ಕವನವಾಚನ ಮಾಡುವುದನ್ನು ಕೇಳುವುದೇ ನನ್ನ ಅಂತಿಮ ಗುರಿ ಆಗಿದ್ದರಿಂದ ತಾಳ್ಮೆಯಿಂದ ಕಾಯುತ್ತಿದ್ದೆ. ಅಂಥ ಕಾಲ ಬಂದೇ ಬಿಟ್ಟಿತು. ಕವಿಗಳೊಬ್ಬರು ಕವನ ವಾಚನ ಶುರು ಮಾಡಿದರು.
ಕವನದ ಶೀರ್ಷಿಕೆ ‘ಮಗು ನೀ ನಗು’ ಎಂದು ಘೋಷಿಸಿದರು.
ಮಗು ನೀ ನಗು
ದೇವರ ಕಂಡರೆ ಬಾಗು
ಮಗು ನೀ ನಗು
ಹೆತ್ತವರ ಕಂಡರೆ ಬಾಗು
ಮಗು ನೀ ನಗು
ಹಿರಿಯರ ಕಂಡ ಬಾಗು
ಮಗು ನೀ ನಗು
ಗುರುಗಳ ಕಂಡರೆ ಬಾಗು
ಮಗು ನೀ ನಗು
ಅಜ್ಜ ಅಜ್ಜಿಯ ಕಂಡರೆ ಬಾಗು
ಮಗು ನೀ ನಗು
ಎಂದು ಅವರ ಕವನ ಮುಂದುವರಿಯುತ್ತಿದ್ದಂತೆ ‘ಅಂಕಲ್‌ನ ಕಂಡರೆ ಬಾಗು, ಆ್ಯಂಟಿಯ ಕಂಡರೆ ಬಾಗು’ ಎಂದು ಗುಣುಗುತ್ತಾ ಎದ್ದು ಹೊರಗೆ ಹೋಗಿ ನೀರು ಕುಡಿದೆ. ಸ್ವಲ್ಪ ಉಸಿರು ದೊಡ್ಡದಾಗಿ ತೆಗೆದುಕೊಂಡೆ. ಅವರ ಕವನ ವಾಚನ ಮುಗಿದು ಸಭಾಸದರು ಚಪ್ಪಾಳೆ ತಟ್ಟಿದ್ದು ಕೇಳಿತು. ಮುಂದಿನ ಕವಿತೆಯಾದರೂ ಕೇಳೋಣ ಎಂದು ಮತ್ತೆ ಒಳ ಹೋದೆ.
ಮಹಿಳೆಯೊಬ್ಬರು ನಗುಮೊಗದಲ್ಲಿ ಕವನ ವಾಚನ ಮಾಡಲು ಬಂದರು. ನನ್ನ ಕವನದ ಶೀರ್ಷಿಕೆ ‘ಕಲ್ಲು’ ಎಂದರು. ‘ಕಲ್ಲು’ ಎಂಬ ಶಬ್ದ ಕಿವಿಯೊಳಗೆ ಬೀಳುತ್ತಿದ್ದಂತೆ ಇದು ಸ್ವಲ್ಪ ಗಟ್ಟಿ ಕವನವೇ ಇರಬೇಕು ಅನ್ನಿಸಿತು.
ಕಲ್ಲು
ಅದರ ಮೇಲೊಂದು ಕಲ್ಲು
ಅದರ ಮೇಲೆ ಮಗದೊಂದು ಕಲ್ಲು
ಕಲ್ಲಿನ ಮೇಲೆ ಕಲ್ಲು
ದೊಡ್ಡ ಕಲ್ಲಿನ ಮೇಲೆ ಸಣ್ಣ ಕಲ್ಲು
ಸಣ್ಣ ಕಲ್ಲಿನ ಕೆಳಗೆ ದೊಡ್ಡ ಕಲ್ಲು
ಕಲ್ಲು ಕಲ್ಲು ಕಲ್ಲು
ಎಂದು ಮುಂದಕ್ಕೆ ವಾಚಿಸುತ್ತಿದ್ದರು. ನಾನು ಪಕ್ಕದಲ್ಲೇ ಏನಾದರೂ ಕಲ್ಲು ಸಿಗುತ್ತಾ ಹುಡುಕಿದೆ. ಸಿಕ್ಕಿದರೆ ವೇದಿಕೆ ಮೇಲೆ ತೂರೋದು ಗ್ಯಾರಂಟಿ ಎಂದು ಅತ್ತಿತ್ತ ನೋಡಿದೆ. ಸಿಗಲಿಲ್ಲ. ಎದ್ದು ಹೊರಬಂದೆ. ಎಲ್ಲೋ ದೂರದಲ್ಲಿ ಕಲ್ಲು ಕಂಡಿತು. ಅಷ್ಟು ಹೊತ್ತಿಗೆ ಮನಸ್ಸು ಬದಲಾಗಿತ್ತು. ಅವರಿಗೆ ಯಾಕೆ ಕಲ್ಲು ಬಿಸಾಡೋದು. ನನ್ನ ತಲೆಗೇ ಚಚ್ಚಿಕೊಳ್ಳುವುದು ಒಳಿತು ಎಂದು ಅಂದುಕೊಂಡೆ. ಚಚ್ಚಿಕೊಂಡರೆ ನನ್ನ ತಲೆಗೇ ಗಾಯ. ಅವರಿಗೇನೂ ಆಗುವುದಿಲ್ಲ ಎಂದು ಯೋಚಿಸಿದೆ. ಮುಂದೆಂದೂ ಕವಿಗೋಷ್ಠಿಗೆ ಹೋಗಬಾರದು ಎಂದೂ ಕವಿಯಾಗಬಾರದು ಎಂದೂ ನಿರ್ಧರಿಸಿ ನಡೆದೆ.
- ನೆಮ್ಮದಿಪ್ರಿಯ