ಬೆಂಗಳೂರು: ಪಶ್ಚಿಮ ಘಟ್ಟಗಳಲ್ಲಿ ಪರಿಸರ ಸೂಕ್ಷ್ಮ ವಲಯ ಘೋಷಣೆಗೆ ಸಂಬಂಧಿಸಿದ ಡಾ.ಕೆ. ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಬೇಕು ಎಂಬ ಬೇಡಿಕೆಯನ್ನು ರಾಜ್ಯ ಸರ್ಕಾರವು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದ ಮುಂದಿಟ್ಟಿದೆ.
ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಭೂಪೇಂದರ್ ಯಾದವ್ ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಶನಿವಾರ ವರ್ಚುವಲ್ ಸಭೆ ನಡೆಸಿದರು. ಇದೇ ಸಂದರ್ಭದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ಪರಿಸರ ಸಚಿವ ಆನಂದ್ ಸಿಂಗ್, ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಮತ್ತು ಸಾಗರ ಶಾಸಕ ಹರತಾಳು ಹಾಲಪ್ಪ ಅವರಿದ್ದ ನಿಯೋಗ ದೆಹಲಿಯಲ್ಲಿ ಕೇಂದ್ರ ಸಚಿವರನ್ನು ಖುದ್ದಾಗಿ ಭೇಟಿ ನೀಡಿ, ರಾಜ್ಯದ ಅಹವಾಲನ್ನೂ ಸಲ್ಲಿಸಿತು.
‘ಉಪಗ್ರಹ ಚಿತ್ರಗಳ ಆಧಾರದ ಮೇಲೆ ಕಸ್ತೂರಿ ರಂಗನ್ ವರದಿ ಸಿದ್ಧಪಡಿಸಲಾಗಿದೆ. ಅದು ವಾಸ್ತವಿಕತೆಗೆ ದೂರವಾದ ವರದಿ. ಈ ವರದಿಯ ಆಧಾರದಲ್ಲಿ ಪರಿಸರ ಸೂಕ್ಷ್ಮ ವಲಯಗಳನ್ನು ಘೋಷಿಸಿದರೆ ಪಶ್ಚಿಮ ಘಟ್ಟ ಪ್ರದೇಶನದ ಜನರ ಜೀವನೋಪಾಯಕ್ಕೆ ಧಕ್ಕೆಯಾಗುತ್ತದೆ. ಕಸ್ತೂರಿ ರಂಗನ್ ವರದಿಯ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಮತ್ತು ಈ ಭಾಗದ ಜನರ ಒಕ್ಕೊರಲಿನ ವಿರೋಧವಿದೆ’ ಎಂದು ಬೊಮ್ಮಾಯಿ ಕೇಂದ್ರ ಸಚಿವರಿಗೆ ತಿಳಿಸಿದರು.
ಬಾಧಿತರಾಗಬಹುದಾದ ಜನರು, ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಸೇರಿದಂತೆ ಎಲ್ಲರ ಜತೆ ಸರ್ಕಾರ ಸಮಾಲೋಚನೆ ನಡೆಸಿದೆ. ಆ ಬಳಿಕ ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸುವ ನಿರ್ಣಯವನ್ನು ರಾಜ್ಯ ಸಂಪುಟ ಕೈಗೊಂಡಿದೆ. ಕೇಂದ್ರ ಸರ್ಕಾರವೂ ಈ ವರದಿಯನ್ನು ತಿರಸ್ಕರಿಸುವ ತೀರ್ಮಾನ ಮಾಡಬೇಕು ಎಂದು ಒತ್ತಾಯಿಸಿದರು.
ಅರಣ್ಯ ಸಂರಕ್ಷಣಾ ಕಾಯ್ದೆ ಸೇರಿದಂತೆ ಹಲವು ಕಾನೂನುಗಳು ಈಗಾಗಲೇ ಜಾರಿಯಲ್ಲಿವೆ. ಅವುಗಳನ್ನು ಕರ್ನಾಟಕದಲ್ಲಿ ಸಮರ್ಪಕವಾಗಿ ಅನುಷ್ಠಾನಕ್ಕೆ ತಂದಿದ್ದು, ದೇಶದಲ್ಲಿ ಅತಿಹೆಚ್ಚು ಅರಣ್ಯ ಪ್ರದೇಶವಿರುವ ರಾಜ್ಯಗಳಲ್ಲಿ ಒಂದಾಗಿದೆ. ಈಗ ಮತ್ತೊಂದು ಕಾನೂನನ್ನು ಈ ಭಾಗದ ಜನರ ಮೇಲೆ ಹೇರುವ ಮೂಲಕ ಅವರ ಜೀವನಕ್ಕೆ ಧಕ್ಕೆ ತರುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಪ್ರತಿಪಾದಿಸಿದರು.
ರಾಜ್ಯದ ಪಶ್ಚಿಮ ಘಟ್ಟ ಪ್ರದೇಶದ ಪ್ರತಿ ಎಕರೆ ಜಮೀನನ್ನೂ ಪ್ರತ್ಯೇಕವಾಗಿ ಸಮೀಕ್ಷೆ ನಡೆಸಬೇಕು. ಜನರು ಅಳವಡಿಸಿಕೊಂಡಿರುವ ಪರಿಸರ ಸ್ನೇಹಿ ಜೀವನ ಶೈಲಿಯನ್ನು ಗಣನೆಗೆ ತೆಗೆದುಕೊಳ್ಳಬೇಕು. ವಾಸ್ತವಿಕ ಸಂಗತಿಗಳ ಆಧಾರದಲ್ಲೇ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.