Saturday, December 14, 2024
Homeಸುದ್ದಿರಾಜ್ಯಕಾಂಗ್ರೆಸ್ ತಟ್ಟೆಯಲ್ಲಿ ಊಟ ಮಾಡುವವರಿಗೆ ಅಡ್ಡಿ ಇಲ್ಲ: ಮಧು ಬಂಗಾರಪ್ಪ

ಕಾಂಗ್ರೆಸ್ ತಟ್ಟೆಯಲ್ಲಿ ಊಟ ಮಾಡುವವರಿಗೆ ಅಡ್ಡಿ ಇಲ್ಲ: ಮಧು ಬಂಗಾರಪ್ಪ

ಶಿರಸಿ: ಪಕ್ಷದ ಹಿತದೃಷ್ಟಿಯಿಂದ ಯಾವ ಪಕ್ಷದವರಿಗಾದರೂ ಕಾಂಗ್ರೆಸ್ ತಟ್ಟೆಯಲ್ಲಿ ಊಟ ಮಾಡಬೇಕು ಎಂದನ್ನಿಸಿದರೆ, ಅವರಿಗೆ ಅಡ್ಡಿಪಡಿಸುವುದಿಲ್ಲ. ಸ್ವಾಗತ ನೀಡಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು.  ಶಿರಸಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ಈಗಾಗಲೇ ಹೊಟ್ಟೆ ತುಂಬಿದೆ. ಆದರೆ ಬೇರೆಯವರು ಬಂದು ಊಟ ಮಾಡುವಷ್ಟು ತಟ್ಟೆಯಲ್ಲಿ ಊಟವಿದೆ. ಪಕ್ಷದ ಹಿತದೃಷ್ಟಿಯಿಂದ ಬೇರೆ ಪಕ್ಷದ ನಾಯಕರು ಬಂದಲ್ಲಿ ಸ್ವಾಗತಿಸಲಾಗುವುದು ಎಂದರು.  ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡು ಶಾಸಕರು, ಮಾಜಿ ಶಾಸಕರು ಕಾಂಗ್ರೆಸ್‌ಗೆ ಬರಬಹುದು. ಆಯಾ ಕ್ಷೇತ್ರದಲ್ಲಿ ಸ್ಥಳೀಯ ನಾಯಕರ ಅಸಮಾಧಾನ ಇದ್ದಲ್ಲಿ ಅದನ್ನು ಹಿರಿಯ ನಾಯಕರು ಬಗೆಹರಿಸುತ್ತಾರೆ ಎಂದು ಹೇಳಿದರು.  ಪ್ರಧಾನಮಂತ್ರಿ ದೇಶಕ್ಕೆ ತಂದೆಯಿದ್ದಂತೆ. ಸಂತೋಷದ ಸಮಯದಲ್ಲಿ ಇಸ್ರೋ ಭೇಟಿಗೆ ರಾಜ್ಯಕ್ಕೆ ಬಂದಂತೆ ಕಷ್ಟದಲ್ಲಿ ಇರುವ ಮಣಿಪುರಕ್ಕೆ ಯಾಕೆ ಹೋಗಿಲ್ಲ ಎನ್ನುವುದಕ್ಕೆ ಬಿಜೆಪಿಯ ನಾಯಕರು ಅಥವಾ ಕಾರ್ಯಕರ್ತ ಉತ್ತರಿಸಲಿ. ಮೋದಿ ರಾಜ್ಯಕ್ಕೆ ಬಂದಾಗ ಬಿಜೆಪಿ ನಾಯಕರನ್ನು ಇಡಬೇಕಾದ ಜಾಗದಲ್ಲಿ ಇಟ್ಟಿದ್ದಾರೆ. ವಿರೋಧ ಪಕ್ಷದ ನಾಯಕನೂ ಇಲ್ಲದ ಬಿಜೆಪಿಗರಿಗೆ ಸರಿಯಾಗಿ ಶಾಸ್ತಿಯಾಗಿದೆ ಎಂದರು. ಶಾಸಕ ಭೀಮಣ್ಣ ನಾಯ್ಕ ಇದ್ದರು.‌