Saturday, December 14, 2024
Homeಸುದ್ದಿಕಾನೂನು ವಿ.ವಿ ಬಳಿ ಪ್ರತಿಭಟನೆ: ಮೂವರು ಪೊಲೀಸ್ ವಶಕ್ಕೆ ಕುಲಪತಿಗೆ ಮಸಿ ಎರಚಿದ ವಿದ್ಯಾರ್ಥಿ

ಕಾನೂನು ವಿ.ವಿ ಬಳಿ ಪ್ರತಿಭಟನೆ: ಮೂವರು ಪೊಲೀಸ್ ವಶಕ್ಕೆ ಕುಲಪತಿಗೆ ಮಸಿ ಎರಚಿದ ವಿದ್ಯಾರ್ಥಿ

ಹುಬ್ಬಳ್ಳಿ: ಮೂರು ಮತ್ತು ಐದನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೂ ಮುಂದಿನ ಸೆಮಿಸ್ಟರ್‌ಗೆ ಬಡ್ತಿ ನೀಡಬೇಕು ಎಂದು ಆಗ್ರಹಿಸಿ, ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಎನ್‌ಎಸ್‌ಯುಐ ನೇತೃತ್ವದಲ್ಲಿ ಬುಧವಾರ ನಡೆಸಿದ ಪ್ರತಿಭಟನೆ ಸಂದರ್ಭದಲ್ಲಿ ವಿದ್ಯಾರ್ಥಿಯೊಬ್ಬ ಕುಲಪತಿ ಮೇಲೆ ಮಸಿ ಎರಚಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಎಪಿಎಂಸಿ ನವನಗರ ಠಾಣೆ ಪೊಲೀಸರು ಮೂವರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದ್ದಾರೆ.

ವಿ.ವಿ.ಯ ಪ್ರವೇಶ ದ್ವಾರದ ಬಳಿ ನಡೆಯುತ್ತಿದ್ದ ಪ್ರತಿಭಟನೆಗೆ ಚಿತ್ರದುರ್ಗ, ಬೆಳಗಾವಿ, ಶಿವಮೊಗ್ಗ, ಚಿಕ್ಕೋಡಿ ಸೇರಿದಂತೆ ವಿವಿಧ ಭಾಗಗಳಿಂದ ಬಂದ ವಿದ್ಯಾರ್ಥಿಗಳು ಸೇರಿಕೊಂಡಿದ್ದರು. ಸಂಜೆಯ ಹೊತ್ತಿಗೆ ವಿ.ವಿ.ಯ ಕುಲಪತಿ ಪ್ರೊ. ಈಶ್ವರ ಭಟ್ ಅವರು ವಿದ್ಯಾರ್ಥಿಗಳಿಂದ ಮನವಿ ಸ್ವೀಕರಿಸಲು ಬಂದರು.

‘ನಿಮ್ಮ ಬೇಡಿಕೆಯನ್ನು ಈಡೇರಿಸಲು ಸಾಧ್ಯವಿಲ್ಲ. ಹಾಗಾಗಿ, ಪ್ರತಿಭಟನೆ ಕೈಬಿಡಿ’ ಎಂದು ಹೇಳಿ ಸ್ಥಳದಿಂದ ಹೊರಡಲು ಮುಂದಾದರು. ಇದರಿಂದ ಕೆರಳಿದ ವಿದ್ಯಾರ್ಥಿಯೊಬ್ಬ ಕುಲಪತಿಯತ್ತ ಇಂಕ್ ಎರಚಿದ. ತಕ್ಷಣ ಪೊಲೀಸರು ವಿದ್ಯಾರ್ಥಿಯನ್ನು ತಡೆಯಲು ಮುಂದಾದರು. ಈ ವೇಳೆ, ವಿದ್ಯಾರ್ಥಿಗಳು ಮತ್ತು ಪೊಲೀಸರ ಮಧ್ಯೆ ತಳ್ಳಾಟ ಜರುಗಿತು.

ಹಠಾತ್ ನಡೆದ ಘಟನೆಯಿಂದ ವಿಚಲಿತಗೊಂಡ ಕುಲಪತಿ, ಪೊಲೀಸರ ಬೆಂಗಾವಲಿನಲ್ಲಿ ಸ್ಥಳದಿಂದ ತಮ್ಮ ಕಚೇರಿಯತ್ತ ಹೋದರು. ನಂತರ ಪೊಲೀಸರು ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ಚದುರಿಸಿದರು. ಮಸಿ ಎರಚಿದ ವಿದ್ಯಾರ್ಥಿ ಸೇರಿದಂತೆ, ಮೂವರನ್ನು ವಶಕ್ಕೆ ಪಡೆದು ವಾಹನಕ್ಕೆ ಹತ್ತಿಸಿಕೊಂಡು ಕರೆದೊಯ್ದರು.