ಬೆಳಗಾವಿ: ಈಚೆಗೆ ನಗರದಲ್ಲಿ ನಡೆದಿದ್ದ ಸಿವಿಲ್ ಪೊಲೀಸ್ ಕಾನ್‌ಸ್ಟೆಬಲ್ ನೇಮಕಾತಿ ಲಿಖಿತ ಪರೀಕ್ಷೆ ವೇಳೆ ತಂತ್ರಜ್ಞಾನ ಬಳಸಿ ನಕಲು ಮಾಡಿದ ಪ್ರಕರಣವನ್ನು ಗೃಹ ಇಲಾಖೆಯು ಸಿಐಡಿಗೆ ಹಸ್ತಾಂತರಿಸಿದೆ.
‘ರಾಜ್ಯದ ಹಲವೆಡೆ ಇಂತಹ ಪ್ರಕರಣಗಳು ನಡೆದಿರುವ ಬಗ್ಗೆ ವರದಿಯಾಗಿದೆ. ಹೀಗಾಗಿ, ಸಿಐಡಿಗೆ ಹಸ್ತಾಂತರಿಸಲಾಗಿದೆ’ ಎಂದು ಡಿಸಿಪಿ ವಿಕ್ರಂ ಅಮಟೆ ‘ಪ್ರಜಾವಾಣಿ’ಗೆ ಖಚಿತಪಡಿಸಿದರು.
ಅ.24ರಂದು ನಡೆದಿದ್ದ ಪರೀಕ್ಷೆ ವೇಳೆ ಬ್ಲೂಟೂತ್ ಬಳಸಿ ನಕಲು ಮಾಡುತ್ತಿದ್ದ ಯುವಕ, ಯುವತಿ ಸೇರಿದಂತೆ 14 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಅವರಿಂದ 33 ಮೊಬೈಲ್‌ಗಳು, 9 ಮಾಸ್ಟರ್ ಕಾರ್ಡ್ ಸಾಧನಗಳು, 19 ಬ್ಲೂಟೂತ್ ಉಪಕರಣಗಳು, 3 ಟ್ಯಾಬ್‌ಗಳು, 1 ಲ್ಯಾಪ್‌ಟಾಪ್, 1 ಪ್ರಿಂಟರ್, 1 ಕಾರು ಹಾಗೂ ಮೂರು ದ್ವಿಚಕ್ರವಾಹನಗಳನ್ನು ವಶಕ್ಕೆ ಪಡೆದಿದ್ದರು. ಸಿಇಎನ್ ಅಪರಾಧ ಠಾಣೆ ಹಾಗೂ ಡಿಸಿಐಬಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದರು.
ರಾಮತೀರ್ಥನಗರದಲ್ಲಿರುವ ಎಸ್.ಎಸ್. ಡೆಕೊರೇಟರ್ ಮತ್ತು ಈವೆಂಟ್ ಪ್ಲ್ಯಾನರ್ ಕಚೇರಿ ಮೇಲೆ ದಾಳಿ ನಡೆಸಿದ್ದರು. ಅಲ್ಲಿದ್ದ ಕೆಲವರು ಮೊಬೈಲ್ ಫೋನ್ ಮತ್ತು ಬ್ಲೂಟೂತ್ ಸಾಧನ ಬಳಸಿ, ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳಿಗೆ ಪ್ರಶ್ನೆಗಳನ್ನು ಬಿಡಿಸಲು ನೆರವಾಗುತ್ತಿದ್ದುದು ಕಂಡುಬಂದಿತ್ತು. ವನಿತಾ ವಿದ್ಯಾಲಯ ಇಂಗ್ಲಿಷ್ ಮಾಧ್ಯಮ ಶಾಲೆ ಹಾಗೂ ಸರ್ದಾರ್ ಪಿಯು ಕಾಲೇಜಿನ ಕೇಂದ್ರದಲ್ಲಿ ಮಾಸ್ಟರ್‌ಕಾರ್ಡ್ ಹಾಗೂ ಬ್ಲೂಟೂತ್ ಬಳಸಿ ಪರೀಕ್ಷೆ ನಕಲು ಮಾಡುತ್ತಿದ್ದ ಇಬ್ಬರನ್ನು ಬಂಧಿಸಲಾಗಿತ್ತು.
ಈ ಪ್ರಕರಣದಲ್ಲಿ ಪೊಲೀಸ್ ಸಿಬ್ಬಂದಿ ಕೈವಾಡದ ಬಗ್ಗೆ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಸಿಐಡಿಗೆ ವಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.