ಬೆಳಗಾವಿ: ‘ಜಿಲ್ಲೆಯ ಖಾನಾಪುರ ತಾಲ್ಲೂಕು ಹಲಸಿ ಗ್ರಾಮದಲ್ಲಿ ವಿಶ್ವಗುರು ಬಸವೇಶ್ವರರ ಚಿತ್ರಕ್ಕೆ ಸೆಗಣಿ ಮೆತ್ತಿದ ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿ ಜಾಗತಿಕ ಲಿಂಗಾಯತ ಮಹಾಸಭಾ, ರಾಷ್ಟ್ರೀಯ ಬಸವ ಸೇನೆ ಮತ್ತು ಬಸವ ಪರ ಸಂಘಟನೆಗಳ ಪದಾಧಿಕಾರಿಗಳು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
‘ಈಚೆಗೆ ಬೆಂಗಳೂರಿನಲ್ಲಿ ಛತ್ರಪತಿ ಶಿವಾಜಿ ಮಹಾರಾಜ, ಬೆಳಗಾವಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಹಲಸಿಯಲ್ಲಿ ಬಸವೇಶ್ವರರ ಚಿತ್ರಕ್ಕೆ ಕಿಡಿಗೇಡಿಗಳು ಅವಮಾನ ಮಾಡಿರುವುದು ಖಂಡನೀಯ’ ಎಂದರು.
‘ಸುವರ್ಣ ವಿಧಾನಸೌಧದಲ್ಲಿ ಸಂಗೊಳ್ಳಿ ರಾಯಣ್ಣ, ರಾಣಿ ಚನ್ನಮ್ಮ ಅವರ ಪ್ರತಿಮೆಗಳನ್ನು ಸ್ಥಾಪಿಸಲು ನಿರ್ಧರಿಸಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರು ಹೇಳಿರುವುದು ಸ್ವಾಗತಾರ್ಹ. ಅಂತೆಯೇ ಮಹಾಮಾನವತಾವಾದಿ ಬಸವಣ್ಣನವರ ಪತ್ರಿಮೆಯನ್ನೂ ಸ್ಥಾಪಿಸಬೇಕು’ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.
ನಾಗನೂರು ರುದ್ರಾಕ್ಷಿ ಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ರೊಟ್ಟಿ, ಪ್ರಧಾನ ಕಾರ್ಯದರ್ಶಿ ಅಶೋಕ ಮಳಗಲಿ, ರಾಷ್ಟ್ರೀಯ ಬಸವ ಸೇನೆ ಅಧ್ಯಕ್ಷ ಶಂಕರ ಗುಡಸ, ದೀಪಾ ಕುಡಚಿ, ಅಶೋಕ ಸಿದ್ನಾಳ, ಸತೀಶ ಚೌಗಲಾ, ಬಿ.ಎಸ್. ಸುಲ್ತಾನಪುರಿ ಪಾಲ್ಗೊಂಡಿದ್ದರು.