Saturday, December 14, 2024
Homeವಿಡಂಬನೆಅಣಕಕೈಕೊಟ್ಟ ಕಸಿನ್‌ ಸಿಸ್ಟರ್‌

ಕೈಕೊಟ್ಟ ಕಸಿನ್‌ ಸಿಸ್ಟರ್‌

ದಿಗಂತ ಬಿಂಬೈಲ್ಅವರ ಫೇಸ್ ಬುಕ್ ಪುಟದಿಂದ.

ಅಮೆರಿಕದಲ್ಲಿರುವ ಕಸಿನ್ ಸಿಸ್ಟರ್ ಊರಿಗೆ ಬರುತ್ತಿದ್ದೇನೆಂದು ವಾರದ ಹಿಂದೆ ಫೋನ್ ಮಾಡಿದ್ಲು. ಅಗರ್ಭ ಶ್ರೀಮಂತೆ ಆಕೆ. ಎಷ್ಟೆಂದರೆ ಮಿತ್ರರೇ ನೀವು ನಂಬಲ್ಲ, ಕೇಳಿದರೆ ನಿಮ್ಗೆ ರೋಮಾಂಚನ ಆಗ್ತದೆ, ಆಶ್ಚರ್ಯ ಆಗ್ತದೆ ಆದರೂ ನೀವು ನಂಬಲೇಬೇಕು, ತನ್ನ ಊರಿನಲ್ಲಿರುವ ತೋಟವನ್ನ ತನ್ನ ಲ್ಯಾಪ್ ಟಾಪ್ ಗೆ ಕನೆಕ್ಟ್ ಮಾಡಿಕೊಂಡು ತೋಟಕ್ಕೆ ಮಂಗ ಬಂದರೆ ದನಗಳು ಹಾರಿದರೆ ಅಲ್ಲಿಂದಲೇ ನೋಡಿ ಕೆಲಸದವರಿಗೆ ಗದರುವಷ್ಟು ಗಟ್ಟಿ ಕುಳ. ಅವಳ ಗಂಡ ಬಿಟ್ ಕಾಯಿನ್ ಕೊಟ್ಟು ಯುಪಿಎಸ್ ಮತ್ತು ಸೋಲಾರ್ ಎರಡನ್ನು ಹಾಕಿಸಿರುವುದರಿಂದ “ಪವರ್ ಕಟ್ ಎಂದರೆ ಏನು” ಎಂದು ಕೇಳುವಷ್ಟರ ಮಟ್ಟಿಗಿನ ಶ್ರೀಮಂತಿಕೆ. ಊರಿಗೆ ಬಂದಾಗ ಅವರಿವರು ಅಂತಲ್ಲ ಎಲ್ಲರಿಗೂ ಕೈಗೆ ಸಿಕ್ಕಿದ್ದನ್ನ ಕೊಟ್ಟು ಹೊರಡುವವಳಾದ್ದರಿಂದ ಅವಳು ಬರುವ ವಿಷಯ ಕುಟುಂಬದವರಿಗೆಲ್ಲ ತಿಳಿಸಿದಾಗ ಎಲ್ಲರಿಗೂ ಖುಷಿಯೋ ಖುಷಿ. ಮಳೆಯಲ್ಲಿ ಕೊನೆ ತಗಿಯದೆ ಖರ್ಚಿಗೆ ಕಾಸಿಲ್ಲವೆಂದು ಯೋಚಿಸುತ್ತಿದ್ದವರಿಗೆ ಕಸಿನ್ ಸಿಸ್ಟರ್ ಬರುವ ವಿಷಯ ಬಿಸಿಲು ಬಂದಷ್ಟೇ ಸಮಾಧಾನ ತಂದಿತ್ತು.

ಊರಲಿ ಅಡ್ಡಾಡಲೆಂದು ಇಲ್ಲೇ ಒಂದು ಕಾರ್ ಇಟ್ಟು ಹೋಗಿದ್ದಳವಳು. ಊರಿಗೆ ಬಂದಮೇಲೆ ಅವರಿವರ ನೆಂಟರಮನೆ ಸುತ್ತುವ ಕಾರ್ಯಕ್ಕೆ ತನ್ನನ್ನು ಜೊತೆಯಾಗಿಸಿಕೊಂಡಿದ್ದಳು. ಗದ್ದೆ ತೋಟ ಮಳೆಯ ಪರಿಣಾಮಗಳ ಕುರಿತಾಗಿ ಮಾತನಾಡುತ್ತ, “ನಿನ್ ಗದ್ದೆ ಕೊಯ್ಲು ಆಯ್ತಾ” ಎಂದು ಕೇಳಿದವಳಿಗೆ, “ಮಂಗ ನವಿಲಿಗೆ ಗದ್ದೆ ಛೇಣಿ ಕೊಟ್ಟಿನಿ, ಅದೊಂದ್ ಕೆಲ್ಸ ಇಲ್ಲ” ಎಂದು ಉತ್ತರಿಸಿ ಹಲ್ಕಿಸಿದು ಕೂತೆ. ಪೆಟ್ರೋಲ್ ಹಾಕಿಸಲೆಂದು ಬಂಕ್ ನತ್ತ ಗಾಡಿ ತಿರುಗಿಸಿ 20 ಲೀಟರ್ ಹಾಕಲು ಹೇಳಿ, ಪರ್ಸಿನಿಂದ 600 ರೂಪಾಯಿ ತೆಗೆದು ಬಂಕಿನವನ ಕೈಗಿತ್ತಳು. ಅವ ಮುಖ ಸಿಂಡರಿಸಿ ಬೋಳು ತಲೆ ಕೆರೆದುಕೊಂಡು ಇನ್ನು 1400 ಎಂದ. ಓಡಿಸಲು ಹೋದಾಗ ಅತ್ತಿತ್ತ ನೋಡುವ ಮಂಗನಂತೆ, ಒಮ್ಮೆ ಅವನತ್ತ ಒಮ್ಮೆ ನನ್ನತ್ತ ನೋಡಿದ ಕಸಿನ್ ಸಿಸ್ಟರ್ “ಅಲ್ವೋ ಈ ಕಡೆಯಿಂದ ಅಕ್ಕಿ ಕಳಿಸಿ ಆ ಕಡೆಯಿಂದ ಪೆಟ್ರೋಲ್ ತರಿಸುವ ಪ್ಲಾನ್ ಇನ್ನು ಇಂಪ್ಲಿಮೆಂಟ್ ಆಗಿಲ್ವಾ, ಮೂವತ್ ರೂಪಾಯಿ ಆಗುತ್ತೆ ಪೆಟ್ರೋಲ್ ಪ್ರೈಸ್ ಅಂತಿದ್ರಲ್ಲೊ!!” ಒಂದಿಷ್ಟು ಕಕಿಬಕ ಸೇರಿಸಿ ಮುಖವನ್ನ ಗುರಾಯಿಸುವಾಗ, “ಇಲ್ಲ ಮಾರಾಯ್ತಿ ಅದು ಸಮುದ್ರದ ಅಂಡಲ್ಲಿ ಪೈಪ್ ಲೈನ್ ಮಾಡ್ಬಕಾದ್ರೆ ಪೈಪ್ ಒಡ್ದೋಗದಂತೆ, ಹಾಗಾಗಿ ನಮ್ ಸಾಬ್ರು ಅಂಗ್ಡಿಗೆ ಗಮ್ ತಗಂಡೋಗಕ್ ಬಂದಿದ್ರು, ಸಾಬ್ರು ಅಂಗಡಿ ಗಮ್ ಅಂಟಲ್ಲ ಅಂತ ಜಗಳ ಬಿತ್ತು. ಆಮೇಲ್ ಭಟ್ರು ಅಂಗ್ಡಿ ಗೌಡ್ರು ಅಂಗ್ಡಿಲಿ ತಗೋಬೇಕ್ ಅಂತ ಹೋದ್ರೆ ಅಲ್ಲಿ ಗಮ್ ಖಾಲಿ ಆಗಿತ್ತು. ಹಾಗಾಗಿ ಕೆಲ್ಸ ನಿತ್ತಿದೆ” ಅವಳ ಕಕಿಬಕಕ್ಕೆ ನಾನೊಂದಿಷ್ಟು ತಕಕಿಕ ಉತ್ತರ ಕೊಟ್ಟೆ “ಓಹ್ ಶೆಟ್ ಈಗ ದುಡ್ಡು ಕೊಟ್ಟಿರು ಮತ್ತೆ ಕೊಡುವೆ ನಿಂಗೆ” ಎಂದು ಜೇಬಲ್ಲಿದ್ದ ಹಣ್ ಅಡಿಕೆ ಕಾಯಿ ಮಾರಿದ ದುಡ್ಡನ್ನೆಲ್ಲ ಬಂಕಿನವನ ಜೇಬು ತುಂಬಿಸಿದಳು. ಮುಂದೆ ಹೋಗಿ ಎ ಟಿ ಎಂ ನಲ್ಲಿ ದುಡ್ಡು ತೆಗೆದು ಖರ್ಚು ಮಾಡಿ ಊರು ಸುತ್ತಿ ಆಯ್ತು.

ಅವಳು ಹೋಗುವ ಮುಂಚೆ ” ತೋಟದಲ್ಲಿ ಉದುರಿ ಬಿದ್ದ ಗೋಟು ಹೆರ್ಕುಕ್ ಜನ ಬರುಕ್ ಹೇಳಿನಿ, ಮನ್ನೆ ಕೊಟ್ಟಿದ್ ದುಡ್ ಕೊಡು” ಎಂದೆನಷ್ಟೆ. “ಯಾವ ದುಡ್ಡು. ಎಲ್ಲರಿಗೂ ಪುಕ್ಕಟೆ ಕೊಡ್ಲಿಕ್ಕೆ ನಾನು ಬರುದ ಇಲ್ಲಿಗೆ, ಮೈ ಬಗ್ಸಿ ದುಡಿರೋ, ಎಲ್ರೂ ನಂಗ್ ಮೋಸ ಮಾಡ್ಲಿಕ್ಕೆ ಅಂತಾನೆ ನೋಡ್ತಾರೆ, ಇನೋವಾ ಕಾರ್ ತಗೋಳುವಾಗಲೂ ಬಿಡ್ಲಿಲ್ಲ, ನನ್ ಹೆಸ್ರಲ್ಲಿ ಟ್ಯಾಕ್ಸ್ ಹೊಡೆಯೋ ಪ್ಲಾನ್ ಮಾಡಿದ್ರು, ಈಗ ನೀನೂ ಸಹ..” ಎಂದು ಬಾಯಿಗೆ ಬಂದ ಅಚ್ಚ ಕನ್ನಡದ ಪದಗಳನ್ನೆಲ್ಲ ಎದುರು ಸುರಿದಳು. ಜಗಳ ಜೋರಾಯ್ತು ಪಂಚಾಯಿತಿಗೆ “ಯಂಕಪ್ಪಣ್ಣ ಸುಳ್ಳಿಗೆಬೆಲೆ” ಅವರನ್ನ ಕರೆಸಿದ್ದು ಆಯ್ತು. ವಾದದಲ್ಲಿ ಕುಟುಂಬದವರೆಲ್ಲ ಅವಳೇ ಪರವಾಗಿಯೇ ಇದ್ದು, ಅವಳದು ಕೊಡುವ ಕೈ ತಗೊಳ್ಳುವ ಕೈಯಲ್ಲ ಎಂದು ಕೂಗೆಬ್ಬಿಸಿದಾಗ, ನಾನು ಬೇರೆ ದಾರಿ ಕಾಣದೆ ಎಲ್ಲರ ಮುಂದೆ..

ಮೊದಲನೆಯದಾಗಿ ಕ್ಷಮೆಯಿರಲಿ, ಎರಡನೆಯದಾಗಿಯೂ ಕ್ಷಮೆಯಿರಲಿ ಎಂದು ಎದ್ದು ಬಂದೆ. ಮನಸ್ಸಿಗೆ ಬಹಳ ಬೇಸರ ಆಯ್ತು ಮಿತ್ರರೇ, ತೋಟದ ಕಪ್ಪಿನಲಿ ಬಿದ್ದ ಗೋಟಡಿಕೆ ಹೆರಕಿ ಒಲೆದಂಡೆ ಮೇಲೆ ಒಣಿಸಿ ಮಾರಿ ಪಡೆದ ದುಡ್ಡು ಹೀಗಾದಾಗ ಹೊಟ್ಟುರಿಯಲೇ ಬೇಕಲ್ಲ, ಆದರೆ ಸಿಟ್ಟಿತ್ತು ನೋಡಿ ಫೇಸ್ಬುಕ್ ಓಪನ್ ಮಾಡಿ “ಸುಳ್ಳು ಚಕ್ರವರ್ತಿ ಪಟ್ಟದಲ್ಲಿರುವಾಗ ಸತ್ಯ ಕ್ಷಮೆ ಕೇಳಲೇಬೇಕು” ಎಂದು ಪೋಸ್ಟ್ ಹಾಕಿ ಸಮಾಧಾನ ಮಾಡಿಕೊಂಡೆ. ಘಟನೆಯ ಅರಿವಿಲ್ಲದ ನೀವೆಲ್ಲ ಏನೇನೋ ಕಾಮೆಂಟ್ ಹಾಕಿದಿರಿ,ಇರಲಿ ಬಿಡಿ ಬೇಸರವಿಲ್ಲ! ಆದರೆಕಸಿನ್ ಸಿಸ್ಟರ್ ಪೋಸ್ಟ್ ನೋಡಿ ಮೈಉರಿದು ಕೊಂಡು ಬ್ಲಾಕ್ ಮಾಡಿದಳು. ನನಗಂತೂ ಕುರಿ ರಕ್ತದ ಫ್ರೈ ತಿಂದಷ್ಟೇ ಸಮಾಧಾನವಾಯ್ತು. ◆ ದಿಗಂತ್ ಬಿಂಬೈಲ್.