ಬೆಳಗಾವಿ: ‘ಜೆಡಿಎಸ್ ಮುಳುಗುತ್ತಿರುವ ಹಡಗು’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು.
ಗೋಕಾಕದ ಜೆಡಿಎಸ್ ಮುಖಂಡ ಮತ್ತು ಲಿಂಗಾಯತ ಸಮಾಜದ ನಾಯಕ ಅಶೋಕ ಪೂಜಾರಿ ಅವರನ್ನು ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಪಕ್ಷಕ್ಕೆ ಅಧಿಕೃತವಾಗಿ ಬರಮಾಡಿಕೊಂಡು ಮಂಗಳವಾರ ಅವರು ಮಾತನಾಡಿದರು.
‘ಜೆಡಿಎಸ್ ಅಸ್ತಿತ್ವ ಈ ಭಾಗದಲ್ಲಿ ಇಲ್ಲವೇ ಇಲ್ಲ. ಅಶೋಕ ಪೂಜಾರಿ ಕಾರಣದಿಂದ ಗೋಕಾಕದಲ್ಲಿ ಸದ್ದು ಮಾಡುತ್ತಿತ್ತು. ಈಗ ಅವರೂ ಆ ಪಕ್ಷ ತೊರೆದಿದ್ದಾರೆ. ಇದರಿಂದ ಅವರಿಗೆ ಮತ್ತು ನಮ್ಮ ಪಕ್ಷಕ್ಕೆ ಅನುಕೂಲ ಆಗಲಿದೆ’ ಎಂದರು.
‘ನಾನು ಜೆಡಿಎಸ್‌ನಲ್ಲಿದ್ದಾಗ ಅಶೋಕ ಪೂಜಾರಿ ಅವರನ್ನು ಇಲ್ಲಿನ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ಮಾಡಿದ್ದೆ. ಅವರೊಂದಿಗಿನ ಒಡನಾಟ ಬಹಳ ದೀರ್ಘವಾದುದು. ಸಿದ್ಧಾಂತದ ಬಗ್ಗೆ ನಂಬಿಕೆ ಇಟ್ಟುಕೊಂಡಿದ್ದಾರೆ. ಹೋರಾಟದ ಮೂಲಕ ರಾಜಕಾರಣ ಮಾಡುತ್ತಿದ್ದಾರೆ. ರಾಜಕಾರಣಿಗಳಲ್ಲಿ ಹೋರಾಡುವವರು ಕಡಿಮೆ. ಅವರು 3 ಬಾರಿ ಜೆಡಿಎಸ್ ಹಾಗೂ ಒಮ್ಮೆ ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ. ಸೋತರೂ ಅವರು ಛಲ ಬಿಟ್ಟಿಲ್ಲ. ಹೋರಾಟದ ರಾಜಕಾರಣವನ್ನು ಅವರು ನಂಬಿದ್ದಾರೆ. ಅವರಿಗೆ ವಯಸ್ಸಿದೆ ಮತ್ತು ಭವಿಷ್ಯವೂ ಇದೆ. ಆದ್ದರಿಂದ ಅವರು ಕಾಂಗ್ರೆಸ್ ಸೇರಿದ್ದು ಒಳ್ಳೆಯ ತೀರ್ಮಾನ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
‘ಪ್ರಜಾತಂತ್ರದಲ್ಲಿ ಜನಶಕ್ತಿಯ ಮುಂದೆ ಯಾವ ಶಕ್ತಿಯೂ ಏನನ್ನೂ ಮಾಡಲಾಗದು. ಇದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು’ ಎಂದರು.
‘ಮುಂದಿನ ದಿನಗಳಲ್ಲಿ ಗೋಕಾಕಕ್ಕೇ ಬಂದು ರಾಜಕೀಯ ಭಾಷಣ ಮಾಡುತ್ತೇನೆ’ ಎಂದು ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ‘ಗೋಕಾಕ ಕಾಂಗ್ರೆಸ್‌ನ ತವರು. ಅಲ್ಲಿ, ಸತೀಶ ಜಾರಕಿಹೊಳಿ–ಅಶೋಕ ಪೂಜಾರಿ ಸೇರಿ ಗೋಕಾಕದಲ್ಲಿ ಪಕ್ಷವನ್ನು ಬಲಪಡಿಸಬೇಕು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಲ್ಲಿ ಪಕ್ಷ ಗೆಲ್ಲಿಸಬೇಕು’ ಎಂದು ಸೂಚಿಸಿದರು.
‘ವ್ಯಕ್ತಿ ಮುಖ್ಯವಲ್ಲ, ಪಕ್ಷ ಮುಖ್ಯ ಎನ್ನುವುದನ್ನು ಮರೆಯಬಾರದು. ಗೋಕಾಕದಿಂದ ನೀಡುವ ಸಂದೇಶವನ್ನು ಇಡೀ ರಾಜ್ಯ ಗಮನಿಸಲಿದೆ. ಶೀಘ್ರದಲ್ಲೇ ಅಲ್ಲಿ ದೊಡ್ಡ ಸಮಾರಂಭ ಆಯೋಜಿಸಲಾಗುವುದು’ ಎಂದು ತಿಳಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಶಾಸಕಿ ಲಕ್ಷ್ಮಿ ಹೆಬ್ಬಾಳಕರ, ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮುಖಂಡರಾದ ಎ.ಬಿ. ಪಾಟೀಲ, ಅಶೋಕ ಪಟ್ಟಣ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ ಇದ್ದರು.