ಉಡುಪಿ: ಬ್ರಹ್ಮಾವರದ ಕೋಟತಟ್ಟು ಬಾರಿಕೆರೆ ಕೊರಗ ಕಾಲೊನಿಯಲ್ಲಿ ಸೋಮವಾರ ರಾತ್ರಿ ನಡೆದ ಮೆಹಂದಿ ಕಾರ್ಯಕ್ರಮದಲ್ಲಿ ಕೊರಗ ಸಮುದಾಯದವರ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಪ್ರಕರಣ ಸಂಬಂಧ ಕೋಟ ಠಾಣೆ ಪಿಎಸ್‌ಐ ಬಿ.ಪಿ.ಸಂತೋಷ್ ಅವರನ್ನು ಅಮಾನತು ಮಾಡಲಾಗಿದೆ.
ಕೊರಗರ ಮೇಲೆ ಲಾಠಿ ಪ್ರಹಾರ ಘಟನೆ ಸಂಬಂಧ ಉಡುಪಿ ಡಿಎಸ್‌ಪಿ ತನಿಖೆ ನಡೆಸಿ ಸಲ್ಲಿಸಿದ ವರದಿ ಆಧರಿಸಿ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ, ಕೋಟ ಪಿಎಸ್‌ಐ ಸಂತೋಷ್‌ರನ್ನು ಅಮಾನತು ಮಾಡಿ, ಕೋಟ ಠಾಣೆಯ ಸಿಬ್ಬಂದಿಯನ್ನು ವರ್ಗಾವಣೆ ಮಾಡಿದ್ದಾರೆ ಎಂದು ಉಡುಪಿ ಎಸ್‌ಪಿ ಎನ್.ವಿಷ್ಣುವರ್ಧನ್ ತಿಳಿಸಿದ್ದಾರೆ.
ಪ್ರಕರಣದ ವಿವರ: ಡಿ.27ರಂದು ರಾತ್ರಿ ಕೋಟತಟ್ಟು ಬಾರಿಕೆರೆ ಕೊರಗರ ಕಾಲೊನಿಯಲ್ಲಿ ಮದುವೆ ಪ್ರಯುಕ್ತ ಮೆಹಂದಿ ಕಾರ್ಯಕ್ರಮದಲ್ಲಿ ಲೌಡ್ ಸ್ಪೀಕರ್ ಬಳಸಲಾಗಿತ್ತು. ಇದಕ್ಕೆ ಸ್ಥಳೀಯರೊಬ್ಬರು ಆಕ್ಷೇಪ ವ್ಯಕ್ತಪಡಿಸಿ ಕೋಟ ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಲೌಡ್ ಸ್ಪೀಕರ್ ಬಂದ್ ಮಾಡುವಂತೆ ಸೂಚನೆ ನೀಡಿದರೂ ಪಾಲಿಸದ ಕೊರಗರ ವಿರುದ್ಧ ಪೊಲೀಸರು ಲಾಠಿ ಬೀಸಿದ್ದರು. ಮಧುಮಗ ಸೇರಿದಂತೆ ಹಲವರನ್ನು ಠಾಣೆಗೆ ಎಳೆದೊಯ್ದು ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸರು ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ ಎಂದು ಕೊರಗ ಸಮುದಾಯದ ಮುಖಂಡರು ಕೋಟ ಠಾಣೆಯ ಎದುರು ಪ್ರತಿಭಟನೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಒತ್ತಾಯಿಸಿದ್ದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಕೊರಗ ಕಾಲೊನಿಗೆ ಭೇಟಿನೀಡಿ, ಘಟನೆಯ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಎಸ್‌ಪಿಗೆ ಸೂಚಿಸಿದ್ದರು.