ಉಡುಪಿ: ಕೊಲ್ಲೂರಿನ ಮೂಕಾಂಬಿಕಾ ದೇಗುಲದಲ್ಲಿ ಬುಧವಾರ ಕಾಣಿಕೆ ಹುಂಡಿ ಹಣ ಲೆಕ್ಕಾಚಾರ ನಡೆದಿದ್ದು, 52 ದಿನಗಳಲ್ಲಿ 1.36 ಕೋಟಿ ರೂಪಾಯಿ ಸಂಗ್ರಹವಾಗಿದೆ.
ಎರಡು ವರ್ಷಗಳಿಂದ ಕೋವಿಡ್ -19 ರಿಂದಾಗಿ, ದೇಗುಲದಲ್ಲಿ ಭಕ್ತರ ಪ್ರವೇಶ ನಿರ್ಬಂಧ ಹೇರಿದ್ದ ಹಿನ್ನೆಲೆಯಲ್ಲಿ ಆದಾಯಕ್ಕೆ ಕೊರತೆಯುಂಟಾಗಿತ್ತು. ಇದೀಗ ನಿರ್ಬಂಧ ಸಡಿಲಿಕೆಯಾಗಿದ್ದು, 2 ತಿಂಗಳಿನಿಂದ ಕೊಲ್ಲೂರು ಭಕ್ತರ ಸಂಖ್ಯೆ ಜಾಸ್ತಿಯಾಗುತ್ತಿದೆ. ಪ್ರತಿದಿನ ಸಾವಿರಾರು ಸಂಖ್ಯೆಯ ಭಕ್ತರು ಹರಕೆಯೊಡನೆ ದೇವಿಗೆ ಕಾಣಿಕೆ ರೂಪದಲ್ಲಿ ಚಿನ್ನಾಭರಣ ಸಹಿತ ಸಮರ್ಪಿಸುತ್ತಿದ್ದಾರೆ ಎಂದು ದೇವಳದ ಕಾರ್ಯ ನಿರ್ವಹಣಾಧಿಕಾರಿ ಎಸ್.ಪಿ.ಬಿ ಮಹೇಶ್ ತಿಳಿಸಿದ್ದಾರೆ.
ನ.10 ರಂದು ನಡೆದ ಕಾಣಿಕೆ ಹುಂಡಿ ಲೆಕ್ಕಾಚಾರದಲ್ಲಿ 585 ಗ್ರಾಂ ಚಿನ್ನ ಹಾಗೂ 6.4 ಕೆಜಿ ಬೆಳ್ಳಿ ಸಂಗ್ರಹವಾಗಿದೆ. 2020ನೇ ಸಾಲಿನ ನವರಾತ್ರಿ ವೇಳೆ ನಡೆದ ಲೆಕ್ಕಾಚಾರದಲ್ಲಿ ₹92 ಲಕ್ಷ, 615 ಗ್ರಾಂ ಚಿನ್ನ ಹಾಗೂ 3,500 ಗ್ರಾಂ ಬೆಳ್ಳಿ ಸಂಗ್ರಹವಾಗಿತ್ತು. 3 ವರ್ಷಗಳ ಹಿಂದೆ 3 ತಿಂಗಳ ಅವಧಿಯಲ್ಲಿ 1.11 ಕೋಟಿ ರೂಪಾಯಿ ಹುಂಡಿ ಹಣ ಸಂಗ್ರಹವಾಗಿದ್ದು ದಾಖಲಾಗಿದ್ದು. ಇದೀಗ ಕೇವಲ 52 ದಿನಗಳಲ್ಲಿ 1.36 ಕೋಟಿ ರೂಪಾಯಿ ಸಂಗ್ರಹವಾಗಿರುವುದು ದಾಖಲೆಯಾಗಿದೆ.
ಕೋವಿಡ್ ಮಹಾಮಾರಿಯಿಂದಾಗಿ ಇಡೀ ಜಗತ್ತು ಆರ್ಥಿಕ ಹಿನ್ನಡೆಯನ್ನು ಅನುಭವಿಸುತ್ತಿದೆ. ಕೋವಿಡ್ 3ನೇ ಅಲೆ ಬಾರದೆ ಜನರು ನೆಮ್ಮದಿಯಿಂದ ಜೀವಿಸಲಿ ಎಂದು ಮೂಕಾಂಬಿಕೆಯಲ್ಲಿ ಪ್ರಾರ್ಥಿಸಿಕೊಂಡಿದ್ದೇವೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಕೆರಾಡಿ ತಿಳಿಸಿದ್ದಾರೆ.
ಹುಂಡಿ ಹಣ ಎಣಿಕೆಯ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷರ ಜೊತೆ ಸಮಿತಿ ಸದಸ್ಯರಾದ ಗೋಪಾಲಕೃಷ್ಣ ನಾಡ, ಸಂಧ್ಯಾ ರಮೇಶ, ರತ್ನಾ ರಮೇಶ ಕುಂದರ್, ಕಾರ್ಯ ನಿರ್ವಾಹಣಾಧಿಕಾರಿ ಎಸ್. ಪಿ. ಬಿ ಮಹೇಶ್, ಉಪ ಕಾರ್ಯ ನಿರ್ವಹಣಾಧಿಕಾರಿ ಗೋವಿಂದ ನಾಯ್ಕ್ ಇದ್ದರು.