ಉಡುಪಿ: ಆರ್ಯ ಈಡಿಗ ಸಮುದಾಯ ಸೇರಿದಂತೆ ಎಲ್ಲ ಜನಾಂಗಗಳಲ್ಲಿರುವ ಯುವಕರು ಕೋಮು ಗಲಭೆಗಳಲ್ಲಿ ಭಾಗಿಯಾಗಬಾರದು ಎಂದು ಆರ್ಯ ಈಡಿಗ ಮಹಾ ಮಂಡಳಿಯ ರಾಷ್ಟ್ರೀಯ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಕಿವಿಮಾತು ಹೇಳಿದರು.
ಭಾನುವಾರ ನಗರದ ಮಥುರಾ ಕಂಫರ್ಟ್ ಹೋಟೆಲ್‌ನಲ್ಲಿ ಮಾತನಾಡಿದ ಸ್ವಾಮೀಜಿ, ರಾಜಕೀಯ ಪಕ್ಷಗಳ ಸಿದ್ಧಾಂತವನ್ನು ಒಪ್ಪಿಕೊಂಡರೂ ಮತ್ತೊಂದು ಜನಾಂಗಕ್ಕೆ ನೋವುಂಟು ಮಾಡುವ ಕೆಲಸಕ್ಕೆ ಕೈಹಾಕಬಾರದು. ಪಕ್ಷಗಳ ಕುಮ್ಮಕ್ಕಿನಿಂದ ಶೋಷಣೆಗೆ ಒಳಗಾಗಬಾರದು. ಸಮುದಾಯಕ್ಕೆ ಸ್ಪಷ್ಟವಾದ ಗುರಿಯಿದ್ದು, ಅದರೆಡೆಗೆ ಮುನ್ನುಗ್ಗಬೇಕು. ಶಿಕ್ಷಣಕ್ಕೆ ವ್ಯಾಪಾರಕ್ಕೆ ಒತ್ತು ಕೊಡಬೇಕು ಎಂದರು.
ಸರ್ವ ಜನಾಂಗದ ಶಾಂತಿಯ ತೋಟವಾಗಿರುವ ಕರ್ನಾಟಕದಲ್ಲಿ ಸದಾ ಶಾಂತಿ ನೆಲೆಸಬೇಕು. ಧರ್ಮಗಳ ಮಧ್ಯೆ ಘರ್ಷಣೆಗಳು ನಡೆಯಬಾರದು. ಆಚಾರ, ವಿಚಾರಗಳು ಅವರವರ ಧರ್ಮಕ್ಕೆ ಸೀಮಿತವಾಗಿರಲಿ. ಒಂದು ಧರ್ಮದ ಕಟ್ಟುಪಾಡುಗಳನ್ನು ಮತ್ತೊಂದು ಧರ್ಮದ ಮೇಲೆ ಹೇರುವುದು ಸಲ್ಲದು. ಸಂವಿಧಾನವೇ ಎಲ್ಲರ ದೇವರಾಗಿದ್ದು ಒಪ್ಪಿಕೊಂಡು ಪಾಲಿಸಬೇಕು ಎಂದರು.
‘ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ, ಸಿದ್ಧಾಂತಗಳನ್ನು ಎಲ್ಲರೂ ಪಾಲಿಸಬೇಕು. ಒಂದೇ ಜಾತಿ, ಧರ್ಮ, ದೇವರು ಎಂಬ ಗುರುಗಳ ತತ್ವವನ್ನು ಅರಿಯಬೇಕು ಎಂದು ಪ್ರಣವಾನಂದ ಸ್ವಾಮೀಜಿ ಸಲಹೆ ನೀಡಿದರು.