ವಿಜಯನಗರ: ‘ಲಂಚ ಪ್ರಕರಣದಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಬಿಡುಗಡೆಗೊಂಡು ಸಂಭ್ರಮಾಚರಿಸಿ ಕೋವಿಡ್ ನಿಯಮ ಉಲ್ಲಂಘಿಸಿದ ಪಿಎಸ್ಐ ನಾಗಪ್ಪ ಸೇರಿದಂತೆ 13 ಜನರ ವಿರುದ್ಧ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ‘ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ತಿಳಿಸಿದ್ದಾರೆ.
‘ಡಿ.13ರಂದು ಅಕ್ರಮ ಮರಳು ಸಾಗಾಟ ಪ್ರಕರಣ ಕೈಬಿಡಲು ಕೂಡ್ಲಿಗಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಿ. ವೆಂಕಟೇಶ ನಾಯ್ಕ ಅವರಿಂದ ₹2.5 ಲಕ್ಷ ಲಂಚ ಪಡೆಯುತ್ತಿದ್ದಾಗ ಕೊಟ್ಟೂರು ಪೊಲೀಸ್ ಠಾಣೆಯ ಸಿಪಿಐ, ಪಿಎಸ್ಐ ನಾಗಪ್ಪ ಹಾಗೂ ನಾಲ್ವರು ಸಿಬ್ಬಂದಿ ಎಸಿಬಿ ಬಲೆಗೆ ಬಿದ್ದಿದ್ದರು. ಬಳಿಕ ನಾಗಪ್ಪ ಜೈಲು ಸೇರಿದ್ದರು. ಇಲಾಖೆ ಅವರನ್ನು ಕೆಲಸದಿಂದ ಅಮಾನತುಗೊಳಿಸಿತ್ತು. ಜಾಮೀನಿನ ಮೇಲೆ ಹೊರಬಂದ ನಾಗಪ್ಪ ಮತ್ತು ಅವರ ಬೆಂಬಲಿಗರು ಕೊಟ್ಟೂರು ಪಟ್ಟಣದಲ್ಲಿ ಗುರುವಾರ ರಾತ್ರಿ ಕರ್ಫ್ಯೂ ಉಲ್ಲಂಘಿಸಿ, ಡೋಲು ಬಾರಿಸಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದರು. ಯಾರೊಬ್ಬರೂ ಮಾಸ್ಕ್ ಧರಿಸಿರಲಿಲ್ಲ. ಅಂತರ ಕಾಯ್ದುಕೊಂಡಿರಲಿಲ್ಲ’ ಎಂದು ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.
‘ವಾರಾಂತ್ಯ ಕರ್ಫ್ಯೂ ಸಂದರ್ಭದಲ್ಲಿ ಯಾರೂ ಅನಗತ್ಯವಾಗಿ ಹೊರಗೆ ಓಡಾಡಬಾರದು. ಇಲ್ಲವಾದಲ್ಲಿ ವಾಹನ ವಶಪಡಿಸಿಕೊಂಡು ದಂಡ ವಿಧಿಸಲಾಗುವುದು‘ ಎಂದು ತಿಳಿಸಿದರು