Saturday, December 14, 2024
Homeಉತ್ತರ ಕರ್ನಾಟಕಬೆಳಗಾವಿಕೋವಿಡ್ ನಡುವೆಯೂ ಎಮ್ಮೆಗಳ ಓಟ: ಎಫ್‌ಐಆರ್‌ ದಾಖಲು

ಕೋವಿಡ್ ನಡುವೆಯೂ ಎಮ್ಮೆಗಳ ಓಟ: ಎಫ್‌ಐಆರ್‌ ದಾಖಲು

ಬೆಳಗಾವಿ: ‘ಮಕರ ಸಂಕ್ರಾಂತಿ ಅಂಗವಾಗಿ ಇಲ್ಲಿನ ಚವಾಟ ಗಲ್ಲಿಯಲ್ಲಿ ಶುಕ್ರವಾರ ಎಮ್ಮೆಗಳ ಓಟದ ಸ್ಪರ್ಧೆ ಆಯೋಜಿಸಿದ್ದವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ’ ಎಂದು ಡಿಸಿಪಿ ರವೀಂದ್ರ ಗಡಾದ ತಿಳಿಸಿದರು.

‘ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕಾರ್ಯಕ್ರಮದ ವಿಡಿಯೊ ಚಿತ್ರೀಕರಣ ಮಾಡಲಾಗಿದ್ದು, ಮಾರ್ಗಸೂಚಿ ಉಲ್ಲಂಘಿಸಿದ ಎಲ್ಲರ ವಿರುದ್ಧವೂ ಪ್ರಕರಣ ದಾಖಲಾಗಲಿದೆ. ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ’ ಎಂದರು.

ಗಲ್ಲಿಯ ಚವಾಟ ಯುವಕ ಸಂಘಟನೆ, ಪಂಚ ಸಮಿತಿ ವತಿಯಿಂದ ಆಯೋಜಿಸಿದ್ದ ಸ್ಪರ್ಧೆಗೆ ಉತ್ತರ ಮತ ಕ್ಷೇತ್ರದ ಶಾಸಕ ಅನಿಲ ಬೆನಕೆ ಚಾಲನೆ ನೀಡಿದ್ದರು. ಸ್ಥಳೀಯರೊಂದಿಗೆ ಕೊಲ್ಹಾಪುರ ಹಾಗೂ ಸಾಂಗ್ಲಿಯವರು ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು. ವಿಜೇತರಿಗೆ ಬಹುಮಾನ ವಿತರಣೆ ಸಮಾರಂಭವೂ ನಡೆದಿತ್ತು. ಪಾಲ್ಗೊಂಡಿದ್ದ ಬಹುತೇಕರು ಮಾಸ್ಕ್‌ ಧರಿಸುವುದು, ಅಂತರ ಕಾಯ್ದುಕೊಳ್ಳವುದು ಸೇರಿದಂತೆ ಕೋವಿಡ್ ಮಾರ್ಗಸೂಚಿ ಪಾಲಿಸಿರಲಿಲ್ಲ ಎನ್ನಲಾಗಿದೆ.

ಪೊಲೀಸರು, ಶಾಸಕರ ಮೇಲೂ ಎಫ್‌ಐಆರ್‌ ದಾಖಲಿಸಬೇಕು ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯಿಸಿದ್ದಾರೆ.