ಬೆಂಗಳೂರು: ಕ್ರೀಡಾಪಟುಗಳಿಗೆ ವೈಜ್ಞಾನಿಕವಾಗಿ ಮಾರ್ಗದರ್ಶನ ನೀಡಲು ತರಬೇತುಗೊಂಡಿರುವ ಅತ್ಯುತ್ತಮ ಕೋಚ್ಗಳ ಅಗತ್ಯವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇದಕ್ಕಾಗಿ ಪಠ್ಯಕ್ರಮ ರೂಪಿಸಿ ಸೂಕ್ತ ಮಾರ್ಗದರ್ಶನ ನೀಡುವ ಅಗತ್ಯವಿದೆ. ಅಮೃತ್ ಕ್ರೀಡಾ ಯೋಜನೆಯ ಗುರಿ ಈಡೇರಿಸಲು ಸರ್ಕಾರ ಅಗತ್ಯ ನೆರವು ನೀಡಲಿದೆ ಎಂದು ಕಾಮನ್ವೆಲ್ತ್ ಕ್ರೀಡಾಕೂಟದ ಬ್ಯಾಟನ್ ವಿನಿಮಯ ಕಾರ್ಯಕ್ರಮದಲ್ಲಿ ಶುಕ್ರವಾರ ಆನ್ಲೈನ್ ಮೂಲಕ ಭಾಗವಹಿಸಿ ಅವರು ಮಾತನಾಡಿದರು.
ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಈ ಕ್ರೀಡಾ ಕೂಟದಲ್ಲಿ 6 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸುತ್ತಾರೆ. ಕ್ರೀಡಾಕೂಟದ ಬ್ಯಾಟನ್ 9 ಸಾವಿರ ಕಿ.ಮೀ ಪಯಣಿಸಿ ಭಾರತಕ್ಕೆ ಬಂದಿದೆ. ಭಾರತದ ನಾಲ್ಕು ಮಹಾನಗರಗಳಿಗೆ ಬ್ಯಾಟನ್ ಸ್ವೀಕಾರ ಮಾಡುವ ಅವಕಾಶ ದೊರೆತಿದ್ದು, ಈ ಪೈಕಿ ಬೆಂಗಳೂರು ಕೂಡಾ ಒಂದು ಎನ್ನುವುದು ಸಂತೋಷದ ಸಂಗತಿ ಎಂದು ಬೊಮ್ಮಾಯಿ ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಕ್ರೀಡಾ ಲೋಕಕ್ಕೆ ಹೊಸ ಚಿಂತನೆ ಮತ್ತು ಆಯಾಮಗಳನ್ನು ನೀಡಿದ್ದಾರೆ. ಖೇಲೋ ಇಂಡಿಯಾ ಆರಂಭಿಸಿ ಹಳ್ಳಿ ಹಳ್ಳಿಗಳಲ್ಲಿ ವ್ಯವಸ್ಥಿತ ಕ್ರೀಡಾ ಕೂಟಗಳನ್ನು ನಡೆಸಲಾಗುತ್ತಿದೆ. ಜೀತೋ ಇಂಡಿಯಾ ಕಾರ್ಯಕ್ರಮ ಕ್ರೀಡಾಳುಗಳಿಗೆ ಬಹು ದೊಡ್ಡ ಸ್ಫೂರ್ತಿ ನೀಡಿದೆ. ಇದರಿಂದ ಟೋಕಿಯೊ ಒಲಿಂಪಿಕ್ಸ್ನಲ್ಲಿ ಹೆಚ್ಚು ಪದಕಗಳನ್ನು ಗೆಲ್ಲಲು ಸಾಧ್ಯವಾಯಿತು ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಯುವಜನ ಸಬಲೀಕರಣಕ್ಕೆ ಮಹತ್ವವನ್ನು ನೀಡಿದೆ. ನೂತನ ಯುವ ನೀತಿಯನ್ನು ಸರ್ಕಾರ ಜಾರಿಗೊಳಿಸುತ್ತಿದೆ ಎಂದೂ ಬೊಮ್ಮಾಯಿ ಹೇಳಿದರು.