Saturday, December 14, 2024
Homeವೈವಿಧ್ಯಕ್ಷಮೆಯಿರಲಿ ಪ್ರಿಯ ವಿದ್ಯಾರ್ಥಿಗಳೇ

ಕ್ಷಮೆಯಿರಲಿ ಪ್ರಿಯ ವಿದ್ಯಾರ್ಥಿಗಳೇ

ವಿಶ್ವದಲ್ಲೇ ಅತಿ ದೊಡ್ಡ ಶಿಕ್ಷಣ ವ್ಯವಸ್ಥೆಯಿದ್ದರು ನಮ್ಮ ದೇಶ ಒಟ್ಟು ದಾಖಲಾತಿ ಅನುಪಾತ (Gross Enrolment Ration-GER) ಕೇವಲ 27.1%. ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಸುಮಾರು 1000 ವಿಶ್ವವಿದ್ಯಾಲಯ ಮತ್ತು 42,000 ಕಾಲೇಜುಗಳಿದ್ದರೂ ಶಿಕ್ಷಣ ಅನ್ನೋದು ಬಹಳಷ್ಟು ಮಂದಿಗೆ ಗಗನ ಕುಸುಮ. ಒಳ್ಳವರು, ಸೋಶಿಯಲ್ ಕ್ಯಾಪಿಟಲ್ ಇರೋರು ವಿದೇಶಿ ವಿಶ್ವವಿದ್ಯಾಲಯಗಳಿಗೆ ತೆರಳಿ ಜೀವನ ಕಟ್ಟಿಕೊಳ್ಳುತ್ತಿದ್ದಾರೆ. ಉನ್ನತ ವ್ಯಾಸಂಗಕ್ಕೆಂದು 2016 ರಲ್ಲಿ 440,000 ಭಾರತದ ವಿದ್ಯಾರ್ಥಿಗಳು ವಿದೇಶಕ್ಕೆ ಹಾರಿದರೆ, 2019ರಲ್ಲಿ ಈ ಸಂಖ್ಯೆ 770,000 ಇತ್ತು. 2024ರಲ್ಲಿ 1.8 ಮಿಲಿಯನ್ ವಿದ್ಯಾರ್ಥಿಗಳು ವಿದೇಶಕ್ಕೆ ಹಾರಲಿದ್ದಾರೆ.

ಹೀಗೆ ವಿದೇಶಕ್ಕೆ ಹಾರಿಬಿಡುವ ವಿದ್ಯಾರ್ಥಿಗಳ ಹಿನ್ನಲೆ ಏನೆಂದು ಹೇಳುವ ಅವಶ್ಯಕತೆ ಇಲ್ಲ. ಕಾಲೇಜಿಗೆ ಸಲ್ಲಿಸುವ ಅರ್ಜಿಯಲ್ಲಿ ಪೋಷಕರ ವೃತ್ತಿ ಎಂದಿರುವ ಕಾಲಂನಲ್ಲಿ ಅಪ್ಪ ಆಟೋ ರಿಕ್ಷಾ ಚಾಲಕ, ಅಮ್ಮ ಗಾರ್ಮೆಂಟ್ಸ್ ಫ್ಯಾಕ್ಟರಿ ಉದ್ಯೋಗಿ ಎಂದು ಬರೆಯುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಮ್ಮ ದೇಶದ ವಿಶ್ವವಿದ್ಯಾಲಯ/ಕಾಲೇಜುಗಳೇ ಗಟ್ಟಿ. ಇನ್ನು ಚಾಮರಾಜನಗರ, ಕೊಳ್ಳೇಗಾಲ, ಜೋಯಿಡಾ, ಸೇಡಂನಂತಹ ಊರುಗಳ ಬಡಕುಟುಂಬಗಳಲ್ಲಿ, ದಲಿತರ ಕೇರಿಗಳಲ್ಲಿ, ಬುಡಕಟ್ಟು ಜನಾಂಗಗಳಲ್ಲಿ ಹುಟ್ಟಿದವರು ಹೈ ಸ್ಕೂಲ್ ತಲುಪಿದರೆ ಅದೇ ಸಾಧನೆ.

ಇನ್ನು ಕೌಶಲ್ಯಾಭಿವೃದ್ಧಿಯ ಹೆಸರಲ್ಲಿ ವಿದ್ಯಾರ್ಥಿಗಳ ಕ್ರಿಯಾಶೀಲತೆ, ಸ್ವತಂತ್ರ ಚಿಂತನೆ, ವಿಮರ್ಶಾತಕ ಆಲೋಚನೆಗಳನ್ನೇ ಹೊಸಕಿಹಾಕಲಾಗುತ್ತಿದೆ. ಸೆಮಿಸ್ಟರ್ ವ್ಯವಸ್ಥೆ ಜಾರಿಗೆ ತಂದು ಯಾವ ವಿಷಯವನ್ನು ಆಳವಾಗಿ/ಸಮಗ್ರವಾಗಿ ಅಧ್ಯಯನ ಮಾಡದಂತೆ ನೋಡಿಕೊಳ್ಳುಲಾಗುತ್ತಿದೆ. ಹಾಗಾದರೆ ನಮ್ಮ ಬಡ/ದಲಿತ/ ಬುಡಕಟ್ಟು ಜನಾಂಗಕ್ಕೆ ಸೇರಿದ ಮಕ್ಕಳು ಎಷ್ಟು ಕಲಿಯುತ್ತಿದ್ದಾರೆ? ಮಾರುಕಟ್ಟೆಯ ಅಪರಿಮಿತ ಬೇಡಿಕೆಗೆ ಸ್ಪಂದಿಸುತ್ತ, ಈ ದೇಶದ ಧನಿಕರ ಅಡಿಯಾಳುಗಳಾಗಿ ಚೀಪ್ ಕಾರ್ಮಿಕರಾಗಿ ಕೆಲಸ ಕೊಂಡುಕೊಳ್ಳುವಷ್ಟು ಮಾತ್ರ ಕಲಿಯುತ್ತಿದ್ದಾರೆ. Employability skills ಎಂದರೆ ಚೀಪ್ ಲೇಬರ್ ತರಬೇತಿ ಅಂತಲೇ ಓದಿಕೊಳ್ಳಬೇಕಾಗುತ್ತದೆ.

ಮತ್ತೊಂದೆಡೆ ಕರೋನ ಬಡ ವಿದ್ಯಾರ್ಥಿಗಳ ಬದುಕನ್ನ ಇನ್ನಷ್ಟು ದುಸ್ತರಗೊಳಿಸಿದೆ. ವಿದ್ಯಾರ್ಥಿಗಳು ಪೋಷಕರನ್ನ ಕಳೆದುಕೊಂಡಿದ್ದಾರೆ ಅಥವಾ ಪೋಷಕರು ಕೆಲಸ ಕಳೆದುಕೊಂಡಿದ್ದಾರೆ, ನೆಡೆಸುತ್ತಿದ್ದ ವ್ಯಾಪಾರದಲ್ಲಿ ನಷ್ಟ ಅನುಭವಿಸಿದ್ದಾರೆ, ಅಥವಾ ಕರೋನಕ್ಕೆ ತುತ್ತಾಗಿ ಆಸ್ಪತ್ರೆ ಸೇರಿ ತೀರಿಸಲಾಗದಷ್ಟು ಸಾಲ ಮಾಡಿಕೊಂಡಿದ್ದಾರೆ. ಇಂತಹ ಸಮಯದಲ್ಲಿ ವಿದ್ಯಾರ್ಥಿಗಳು ಓದು ಬಿಟ್ಟು ಸಿಕ್ಕ ಕೆಲಸಕ್ಕೆ ಸೇರಿ ಕುಟುಂಬ ನೆರವಾಗುವ ಒತ್ತಡದಲ್ಲಿದ್ದಾರೆ. ಓದಿಕೊಂಡು ಕೆಲಸ ಮಾಡುವೆನ್ನುವ ವಿದ್ಯಾರ್ಥಿಗಳಿಗೆ 75% ಹಾಜರಾತಿ ಭೂತವಾಗಿ ಕಾಡುತ್ತದೆ. ದೇಶದ ವಿದ್ಯಾರ್ಥಿಗಳ distress ಒಂದ ಎರಡಾ! ವಿದ್ಯಾರ್ಥಿಗಳನ್ನ ನೋಡಿದರೆ ಚಾರ್ಲಿ ಚಾಪ್ಲಿನ್ನಿನ “ಮಾಡ್ರನ್ ಟೈಮ್ಸ್” ನೆನಪಾಗುತ್ತದೆ.

ನಮ್ಮ ದೇಶದ ಶಿಕ್ಷಣ ವ್ಯವಸ್ಥೆ ಇಂದಿಗೂ ಒಳಗೊಳ್ಳುವಿಕೆಯ ತತ್ವದ ಮೇಲೆ ನಿಂತಿಲ್ಲ. ಶಿಕ್ಷಣ ವ್ಯವಸ್ಥೆಯಿಂದ ಹೊರಗಿಡಲು Cut-off percentage, entrance, ಆಂಗ್ಲ ಭಾಷಾ ಪ್ರಾವೀಣ್ಯತೆ ಪರೀಕ್ಷೆಗಳನ್ನ ಸೃಷ್ಟಿಸಿದ್ದೇವೆ. ಈ entrance exams crack ಮಾಡಲು ನೀವು ದೊಡ್ಡ ನಗರಕ್ಕೆ ಬಂದು ತರಬೇತಿ ಪಡೆಯಲೇ ಬೇಕು. ತರಬೇತಿಗೆ ಲಕ್ಷಾಂತರ ರೂಪಾಯಿ ತೆರಲೇಬೇಕು.

ಇವೆಲ್ಲಾ ನ್ಯೂನ್ಯತೆಗಳನ್ನ ಮರೆಮಾಚುವಂತೆ ಮೆರಿಟ್ ಅನ್ನು ಪ್ರತಿಭೆಗೆ ಲಿಂಕ್ ಮಾಡಿಬಿಟ್ಟಿದೇವೆ. Entrance ಪಾಸ್ ಆಗಿಲ್ಲವೆಂದರೆ, ನಿರೀಕ್ಷಿತ percentage ಗಳಿಸಲಾಗದಿಲ್ಲದಿದ್ದರೆ ಅಂತಹ ವಿದ್ಯಾರ್ಥಿಗಳು ನನ್ನಲ್ಲಿ ಕ್ಷಮತೆ ಇರಲಿಲ್ಲ, ನನಗೆ ಯೋಗ್ಯತೆ/ಪ್ರತಿಭೆಯಿಲ್ಲವೆಂದು ತನ್ನನ್ನು ತಾನು convince/ದೂಷಿಸಿಕೊಳ್ಳುವ ಹಾಗೆ ಮಾಡಿದ್ದೇವೆ. ಜಾತಿ ಪದ್ಧತಿ/ ವರ್ಣಬೇಧ ನೀತಿ ಹಸನಾಗಿ ಬೆಳೆದಿದ್ದೆ ಈ ರೀತಿಯ convincing/ ದೂಷಿಸಿಕೊಳ್ಳುವ ಉಪಾಯಗಳಿಂದವೆನ್ನುವುದನ್ನ ನಾವು ಗಮನಿಸಬೇಕು.

ಮೆರಿಟ್ ಅನ್ನೋದು ನಾವು ಒಂದು ಸಮಾಜವಾಗಿ ಮಕ್ಕಳಿಗೆ ಹೇಳಿಕೊಂಡು ಬಂದ ಬಹುದೊಡ್ಡ ಸುಳ್ಳು. ಮೆರಿಟ್ ಅನ್ನೋದು ಸೋಶಿಯಲ್ ಕ್ಯಾಪಿಟಲ್ ಮೇಲೆ ಅವಲಂಬಿತವಾಗಿದೆ ಅನ್ನೋದೇ ಬಹಳಷ್ಟು ಮಂದಿಗೆ ತಿಳಿದಿಲ್ಲ. ಪೋಷಕರ ವಿದ್ಯಾರ್ಹತೆ, ವಿದ್ಯಾರ್ಥಿಗೆ ಸಿಗುವ ಸಹಪಾಠಿಗಳು, ಆತ ಹೋಗುವ ಶಾಲೆ, ಆತ ಸೇವಿಸುವ ಆಹಾರ, ಮನೆಯಲ್ಲಿ ಆತ ಯಾವ ಪೀಳಿಗೆಯ ವಿದ್ಯಾರ್ಥಿ, ವರ್ಗ, ಜಾತಿಯೆಲ್ಲದರಿಂದ ನಮ್ಮ ಮೆರಿಟ್ ನಿರ್ಧಾರವಾಗುತ್ತದೆ. ಹುಟ್ಟಿನಿಂದ ಬಂದ ಕ್ಷಮತೆ, ಪ್ರತಿಭೆಯಿಂದಲ್ಲ.

ಹಾಗಾದ್ರೆ ಕೆಳವರ್ಗ/ಜಾತಿಯವರು ಯಾರು ಸಾಧನೆನೇ ಮಾಡಿಲ್ವಾ ಅಂತ ನೀವು ಕೇಳಬಹುದು… ಖಂಡಿತ ಸಾಧಕರು ಇದ್ದಾರೆ ಆದರೆ ಯಶಸ್ಸಿನ ಅನುಪಾತ/ಶೇಕಡವಾರು ಏನು ಅನ್ನುವುದರ ಮಾಹಿತಿ ಪಡೆಯಬೇಕಾಗುತ್ತದೆ ಮತ್ತು ಈ ಸಾಧಕರು ಸಾಧನೆಯ ಹಾದಿಯಲ್ಲಿ ಎದುರಿಸಿದ ತೊಡಕುಗಳು ಎಷ್ಟು ಘೋರವಾಗಿರುತ್ತವೆ ಅನ್ನೋದು ಅರಿಯಬೇಕಾಗುತ್ತದೆ. (ಥ್ರೀ ಈಡಿಯಟ್ಸ್, ಚಿಚೋರೆ, ತಾರೆ ಜಮೀನ್ ಪರ್ ದಂತಹ ಚಿತ್ರ ಗಳ ನಮ್ಮನ್ನ ಶಿಕ್ಷಣ ಕ್ಷೇತ್ರದ ವಾಸ್ತವ ಬಿಕ್ಕಟ್ಟು ಗಳಿಂದ ಎಷ್ಟು ದೂರ ಕರೆದೊಯ್ದಿದೆ ಎಂದು ಅರ್ಥ ಮಾಡಿಕೊಳ್ಳಲು ಪರಿಯೇರುಮ್ ಪೆರುಮಾಳ್ ಚಿತ್ರವನ್ನು ಪದೇ ಪದೇ ನೋಡುವ ಅವಶ್ಯಕತೆಯಿದೆ.)

ಒಳ್ಳವರ ಮಕ್ಕಳು Programmed for Success from the very beginning ಅಂತ ನನಗೆ ಸದಾ ಅನ್ನಿಸಿದೆ. ದೊಡ್ಡ ದೊಡ್ಡ ನಗರದ ಪ್ರತಿಷ್ಠಿತ ಶಾಲೆಗಳಲ್ಲಿ CBSE/ICSE ಪಠ್ಯ ಓದುವ ಕ್ಯಾಲೊರಿ/ನ್ಯೂಟ್ರಿಷನ್ conscious ಪೋಷಕರ ಮಕ್ಕಳ ಜೊತೆ ನಮ್ಮ ಹಳ್ಳಿಯ/ ಪುಟ್ಟನಗರಗಳ ಸರ್ಕಾರಿ ಶಾಲೆಗಳ ಮಕ್ಕಳು ಸ್ಪರ್ಧಿಸುವುದಾದರೂ ಹೇಗೆ. Hence they are doomed from the very beginning.

ನಮ್ಮ ದೇಶ ಅಂಕಿ ಅಂಶಗಳ ಮೇಲೆ ಅತಿಯಾದ ವ್ಯಾಮೋಹ ಇಟ್ಟುಕೊಂಡಿರುವ ದೇಶ. ಶಿಕ್ಷಣ ವ್ಯವಸ್ಥೆಯಲ್ಲಿ ಬೋಧನೆ/ ವಿದ್ಯಾರ್ಥಿಗಳೊಡನೆ ಮುಕ್ತವಾದ ಸಂವಾದ, ಅನುಭವಿ ಕಲಿಕೆಗೆ ಅನುಕೂಲ ಕಲ್ಪಿಸುವ ಬದಲಾಗಿ ಬೋಧಕರು ಅಂಕಿ ಅಂಶಗಳ ಡಾಕ್ಯುಮೆಂಟೇಶನ್ ನಲ್ಲೆ ತೊಡಗಿಕೊಳ್ಳುವಂತೆ ವ್ಯೂಹ ರಚಿಸಲಾಗಿದೆ. ಜನರ ಕಣ್ಣೊರೆಸಲಿಕ್ಕೆ, ದಾರಿ ತಪ್ಪಿಸಿ ಮನತಣಿಸುವುದಕ್ಕಾಗಿ everything is on paper…

ಬಹಳ ಹಿಂದೆ ದೇಶದೆಲ್ಲೆಡೆ ಉತ್ತಮ ಶಿಕ್ಷಣ ಕೊಡುತ್ತೇವೆಂದು ಕೆಲ ನವೋದಯ ಶಾಲೆಗಳನ್ನ ತೆರೆದದ್ದು ನೆನಪಿದೆ. ಈ ನವೋದಯ ಶಾಲೆಗಳು ಎಲ್ಲ ಮಕ್ಕಳಿಗೂ ಗುಣ್ಣಮಟ್ಟ ಶಿಕ್ಷಣ ಒದಗಿಸಿತೇ? ಖಂಡಿತ ಇಲ್ಲ ಆಗಲೇ ಜಾತಿ/ ವರ್ಗಗಳ ಕೂಪದಲ್ಲಿ ಬಿದ್ದು ಒದ್ದಾಡುತಿದ್ದ ಸಮಾಜದಲ್ಲಿ ಮತ್ತೊಂದು ವರ್ಗ ಸೃಷ್ಟಿಸಿತು ಅಷ್ಟೇ. ಹಳ್ಳಿ/ಹೋಬಳಿ ಮಟ್ಟದಲ್ಲೂ ಒಂದು ಎಲೀಟ್ ವಿದ್ಯಾರ್ಥಿಗಳ ಸಮೂಹ ವೊಂದನ್ನ ಸೃಷ್ಟಿಸಿತು. ನಾವೆಲ್ಲ ಶಾಲೆಯಲ್ಲಿ ಓದುವಾಗ ಕೆಲ ವಿದ್ಯಾರ್ಥಿಗಳು ನವೋದಯ entrance ಪರೀಕ್ಷೆಯಲ್ಲಿ ಪಾಸ್ ಆಗಿ ನಮ್ಮ ಶಾಲೆ ಬಿಟ್ಟು ಹೋಗುತ್ತಿದ್ದರು. ಆಗ ನಮಗೆ ಒಂದು ಖಾತ್ರಿ. ಟೀಚರ್ ಮತ್ತು ಪೋಷಕರಿಂದ ಬೈಗುಳ. “ನೋಡು ಅವ ಸಾಧಿಸಿದ್ದು ನೀನು ಏಕೆ ಸಾಧಿಸಲು ಆಗಲಿಲ್ಲ ಅಂತ.” ಆಗ ತಲೆ ತಗ್ಗಸಿ ನಿಲ್ಲುತ್ತಿದ್ದೆವು. ಆದ್ರೆ ಪಾಸ್ ಆಗಿ ಹೋದವ ನಮ್ಮ ಜೊತೆಯಲ್ಲೇ ಇದ್ದ ಸಂಭಾವಿತ, ಎಲೀಟ್, ಹೈಯರ್ ಮಿಡ್ಲ್ ಕ್ಲಾಸ್ ವರ್ಗದವ ಅಂತ ಅರ್ಥ ಆಗೋದರಲ್ಲಿ ಬಹಳಷ್ಟು ಕಾಲ ಹಿಡಿತು.

ನಾನು ಪಿಯುಸಿಯಲ್ಲಿ ಓದಿದ್ದು ವಿಜ್ಞಾನವನ್ನ. ನಾನು SSLC ಯಲ್ಲಿ 70% ಗಳಿಸಿದ್ದೆ. ನನ್ನ ಮಗ ಡಾಕ್ಟರ್ ಅಥವಾ ಇಂಜಿನಿಯರ್ ಆಗಲಿ ಅಂತ ನಮ್ಮಪ್ಪ ಒಂದು ಕಾಲೇಜಿಗೆ ಸೇರಿಸಿದರು. ಆ ಕಾಲೇಜಲ್ಲಿ SSLC ಅಂಕಗಳ ಆಧಾರದ ಮೇಲೆ ಸೆಕ್ಷನ್ಸ್ ಮಾಡಲಾಗಿತ್ತು. ನನ್ನ percentageಗೆ ನನಗೆ ಸಿಕ್ಕ ಸೆಕ್ಷನ್ “ಜೆ.” ನಾವು ವ್ಯಾಸಂಗ ಶುರು ಮಾಡುವ ಮೊದಲೇ ನಮ್ಮದು ಡಬ್ಬ ಸೆಕ್ಷನ್ ಅಂತ ಬ್ರಾಂಡ್ ಆಗಿತ್ತು. ಈ ಅವಮಾನಗಳ ನಡುವೆ ಓದು ತಲೆಗೆ ಹತ್ತಲಿಲ್ಲ. ಆದರೂ ಪಾಸ್ ಅಂತೂ ಅದೇ. ಆದರೆ ಮೆಡಿಸಿನ್ ಅಥವಾ ಒಳ್ಳೆಯ ಇಂಜಿನಿಯರಿಂಗ್ ಕೋರ್ಸ್ ಮಾಡುವಷ್ಟು ಅಂಕಗಳಂತೂ ಬರಲಿಲ್ಲ. ಸಾಕಷ್ಟು ಹಣ ಕಳೆದುಕೊಂಡು ಹತಾಶ ರಾಗಿದ್ದ ನನ್ನಪ್ಪ “ನಾಲಾಯಕ್ ನೀನು, ಬಿಎ ಮಾಡು ಅಂತ ದಬ್ಬಿದರು.” (In retrospect that was a wise decision)

ಕತೆ ಇಲ್ಲಿಗೆ ನಿಲ್ಲೋದಿಲ್ಲ. ಅದೇ ತರಗತಿಯಲ್ಲಿದ್ದ ನನ್ನ ಶ್ರೀಮಂತ ಗೆಳೆಯನೊಬ್ಬ ಆ ವರ್ಷ ಫೇಲ್ ಆದ. ಮತ್ತೆ exam ಬರೆದ. ಮತ್ತೆ ಫೇಲ್ ಆದ. ಒಂದು ವರ್ಷದ ನಂತರ ಪಾಸ್ ಆದ. ಧನಿಕರಾಗಿದ್ದ ಕಾರಣ ಅವನ ತಂದೆ ಅವನನ್ನ ವಿದೇಶಿ ವಿಶ್ವವಿದ್ಯಾಲಯಕ್ಕೆ ಸೇರಿಸಿದರು. There was no looking back. ಇಂದು ಆತ ವಿದೇಶದಲ್ಲಿ ತನ್ನದೇ ಉದ್ಯಮವೊಂದನ್ನ ನೆಡೆಸುತ್ತಿದ್ದಾನೆ. ಆಗಾಗ ಬೆಂಗಳೂರಿಗೆ ಬಂದಾಗ ವಿಲಾಸಿ ಹೋಟೆಲ್ಗಳಿಗೆ ಬರಹೇಳುತ್ತಾನೆ… ನಾನು ಹೋಗುತ್ತೇನೆ… ಶುಭ ಹಾರೈಸಿ ಬರುತ್ತೇನೆ…

ನನ್ನ ತರಗತಿಯ ವಿದ್ಯಾರ್ಥಿಗಳಲ್ಲಿ ನನ್ನದೇ ಪ್ರತಿಬಿಂಬವನ್ನು ಕಾಣುತ್ತೇನೆ. ರಭಸವಾಗಿ ಹರಿಯುವ ನದಿಯಲ್ಲಿ ಅವರೆಲ್ಲ ಸಿಕ್ಕಿಹಾಕಿಕೊಂಡಿದ್ದಾರೆ, ಸಹಾಯ ಬೇಡತ್ತಿದ್ದಾರೆ ಅಂತ ಅನ್ನಿಸುತ್ತೆ. ಅಲೆಗೆ ಎದುರಾಗಿ ಈಜಿ ಅವರನ್ನ ದಡ ಸೇರಿಸುವಷ್ಟು ಬಲ ನನ್ನಲಿಲ್ಲ. ದಡದ ಮೇಲೆ ಕುಳಿತು ನಾನೇ ಕೊಚ್ಚಿಹೋಗುವುದ್ದನ್ನೇ ನೋಡುತ್ತೇನೆ. ಹೀಗೆ ಆಲೋಚಿಸುವುದ್ದಕ್ಕಾಗಿ ಬೇರೆಯವರಿಂದ ನಿಂದನೆ, ನಿರ್ಲಕ್ಷ್ಯ ಗಳಿಗೆ ಒಳಗಾಗಿದ್ದೇನೆ… “ಪ್ರಾಕ್ಟಿಕಲ್ ಆಗಿ ಬದುಕೋದು ಬಿಟ್ಟು ಸಮಾಜ, ಜಾತಿ, ವರ್ಗ ಅಂತ ಗೊಣಗುತ್ತಿಯ, ಸುಮ್ಮನೆ ಹಗಲಿರುಳು ಅಕ್ಷರ “ಕುಟ್ಟುತ್ತೀಯ…” ಹೀಗೆ ನಿರಂತರ ಅವಮಾನಗಳ ಸರಮಾಲೆ ನನ್ನ ಕೊರಳಲ್ಲಿವೆ… I feel that I am going down a never ending sinkhole…

ಇದೇಲ್ಲದರ ನಡುವೆ ವಿದೇಶಿ ವಿಶ್ವವಿದ್ಯಾಲಯಗಳು ಭಾರತಕ್ಕೆ ಬರಲಿವೆ. ಆ ಕಾರಣಕ್ಕಾಗಿಯೇ ಮೊದಲು ವಿದೇಶದಲ್ಲಿ ವ್ಯಾಸಂಗ ಮಾಡುವವರ ಪ್ರಸ್ತಾಪಿಸಿದ್ದು ಈಗಾಗಲೇ ಇರುವ ದುಬಾರಿ ಖಾಸಗಿ/ ಡೀಮ್ಡ್ ವಿಶ್ವವಿದ್ಯಾಲಯಗಳ ಜೊತೆಗೆ ಆಕ್ಸ್ಫರ್ಡ್, ಯೇಲ್, ಹಾರ್ವರ್ಡ್ ವಿಶ್ವವಿದ್ಯಾಲಯಗಳಿಗೆ ನಮ್ಮ ನೆಲದಲ್ಲಿ ತಮ್ಮ ಕ್ಯಾಂಪಸ್ ತೆರೆಯುವ ಅವಕಾಶ ಕೊಡಲಾಗಿದೆ. ಅಡ್ಮಿಶನ್, ಮತ್ತಿತರ ಶುಲ್ಕಗಳ ವಿಷಯದಲ್ಲಿ ಈ ವಿಶ್ವವಿದ್ಯಾಲಯಗಳ ನಿರ್ಧಾರವೇ ಅಂತಿಮವಂತೆ… ವಿದೇಶಿ ವಿಶ್ವವಿದ್ಯಾಲಯಗಳಿಗೆ ಬಾಗಿಲು ತೆರೆಯುವುದರ ಬದಲು ನಮ್ಮ ಶಿಕ್ಷಣ ವ್ಯವಸ್ಥೆಯನ್ನೇ ಸರಿ ಪಡಿಸಿ, ನಮ್ಮ ವಿಶ್ವವಿದ್ಯಾಲಯಗಳ ಗುಣಮಟ್ಟವನ್ನೇ ಸುಧಾರಿಸಬಹುದಿತೆಂಬುದು ಹಲವು ತಜ್ಞರ ಅನಿಸಿಕೆಯಾಗಿದೆ. ಈ ನಡೆಯಿಂದ ಕಲಿಕೆ ಡೆಮೊಕ್ರಟೈಸ್ ಆಗುವುದೇ? ಅಥವಾ ಇದು ಮಹಾನಗರಗಳ ಮತ್ತೊಂದು ನವೋದಯ/ಪ್ರತಿಷ್ಠಿತ ದುಬಾರಿ ಶಾಲೆಗಳಂತಾಗುವವೆ… ? ನೀವೇ ಹೇಳಬೇಕು… ಸದ್ಯಕ್ಕೆ ಯಾವುದೋ ಮಹಾನಗರದ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರು ತಮ್ಮ ಕ್ಯಾಂಪಸ್ನಲ್ಲಿ ಶೌಚಾಲಯವಿಲ್ಲದೆ ಮೆಟ್ರೋ ರೈಲು ನಿಲ್ದಾಣದ ಶೌಚಾಲಯವನ್ನೇ ಅವಲಂಬಿಸಿರುವ ವರದಿ ಓದಿದೆ… ಹೋಗ್ಲಿ ಬಿಡಿ ಇದೆಲ್ಲಾ ಚರ್ಚಿಸುವ ವಿಷಯವಲ್ಲ… ಪಠಾಣ್ ಚಿತ್ರ ಜಯಭೇರಿ ಬಾರಿಸಿದೆ… ಭಕ್ತರು ತಕ್ಕ ಪಾಠ ಕಲಿತಿದ್ದಾರೆ… Victory is ours!

Harish Gangadhar