Saturday, December 14, 2024
Homeಕಲ್ಯಾಣ ಕರ್ನಾಟಕಬಳ್ಳಾರಿಗಾಯಕಿ ವಿಜಯಾ ಕಿಶೋರ್‌ ನಿಧನ

ಗಾಯಕಿ ವಿಜಯಾ ಕಿಶೋರ್‌ ನಿಧನ

ಬಳ್ಳಾರಿ: ಹಿಂದೂಸ್ತಾನಿ ಸಂಗೀತದ ಗಾಯಕಿ ವಿಜಯಾ ಕಿಶೋರ್‌ (61) ಬುಧವಾರ ಬೆಳಿಗ್ಗೆ ನಗರದಲ್ಲಿ ನಿಧನರಾದರು. ನಗರದ ಖಾಸಗಿ ಆಸ್ಪತ್ರೆಯಲ್ಲಿ ಒಂದುವಾರದಿಂದ ಅನಾರೋಗ್ಯದಿಂದಾಗಿ ದಾಖಲಾಗಿದ್ದರು. ಅವರಿಗೆ ಮಗ ಮತ್ತು ಮಗಳು ಇದ್ದಾರೆ.

ವಿಜಯಾ ಅವರ ಅಂತ್ಯಕ್ರಿಯೆ ಬುಧವಾರ ಸಂಜೆ ನಡೆಯಿತು. ಮೂಲತಃ ಮೈಸೂರಿನವರಾದ ವಿಜಯಾ ಕಿಶೋರ್‌, ಹಿರಿಯ ರಂಗ ಕಲಾವಿದರಾಗಿದ್ದ ಕೊಟ್ಟೂರಪ್ಪನವರ ಮೊಮ್ಮಗಳು. ಬಳ್ಳಾರಿ ಹಿರಿಯ ವೈದ್ಯೆ ಸುನಂದಮ್ಮ ಅವರ ಪುತ್ರನನ್ನು ವಿವಾಹವಾಗಿದ್ದರು. ಸಂಗೀತದ ಬಗೆಗಿನ ತುಡಿತ ಅವರನ್ನು ದಿವಂಗತ ಎ.ಚಂದ್ರಶೇಖರ ಗವಾಯಿ ಅವರ ಗರಡಿಗೆ ಕರೆತಂದಿತ್ತು.

ವಿಜಯಾ ಅವರು ಆಕಾಶವಾಣಿ ಹಾಗೂ ದೂರದರ್ಶನದಲ್ಲಿ ‘ಬಿ–ಹೈ’ ಶ್ರೇಣಿ ಗಾಯಕರೂ ಆಗಿದ್ದರು. ಮೈಸೂರು ದಸರಾ ಉತ್ಸವ, ಹಂಪಿ ಉತ್ಸವ, ಆನೆಗುಂದಿ ಉತ್ಸವ, ಪುರಂದರ ದಾಸರ ಆರಾಧನಾ ಕಾರ್ಯಕ್ರಮಗಳಲ್ಲಿ ಕಚೇರಿ ನಡೆಸಿಕೊಟ್ಟಿದ್ದರು.

‘ಸುಸ್ವರ ಸಂಗೀತ ವಿದ್ಯಾಲಯ’ ಸ್ಥಾಪಿಸಿ ಹಲವು ಶಿಷ್ಯರನ್ನು ತಯಾರು ಮಾಡಿದ್ದರು.