ಬೆಂಗಳೂರು: ಬೈಕ್‌ಗೆ ಪೆಟ್ರೋಲ್ ಹಾಕಿಸಿಕೊಳ್ಳುವ ನೆಪದಲ್ಲಿ ಬಂಕ್‌ಗೆ ಬಂದು ಕ್ಯಾಷಿಯರ್ ಬಳಿ ಇದ್ದ ಹಣ ದೋಚಲು ಯತ್ನಿಸಿದ್ದ ಇಬ್ಬರನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸೈಯದ್ ಆಜಂ ಯಾನೆ ಲಂಗ್ಡಾ ಆಜಂ (32) ಹಾಗೂ ರಮೀಜ್ ಖಾನ್ (23) ಬಂಧಿತರು.
ಲಂಗ್ಡಾ ಆಜಂ ವಿರುದ್ಧ 2012ರಲ್ಲಿ ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ಮನೆಗಳವು ಪ್ರಕರಣ ದಾಖಲಾಗಿತ್ತು. ಜೆಜೆ ನಗರ ನಿವಾಸಿಯಾಗಿರುವ ಆರೋಪಿ ಜೆ.ಸಿ.ರಸ್ತೆಯ ಗ್ಯಾರೇಜೊಂದರಲ್ಲಿ ಕೆಲಸ ಮಾಡುತ್ತಿದ್ದ. ಬ್ಯಾಟರಾಯನಪುರ ನಿವಾಸಿ ರಮೀಜ್ ಜೊತೆ ಉತ್ತಮ ಒಡನಾಟ ಹೊಂದಿದ್ದ. ರಮೀಜ್ ವಿರುದ್ಧ ದರೋಡೆಗೆ ಸಿದ್ಧತೆ ಆರೋಪದ ಅಡಿ ಪ್ರಕರಣ ದಾಖಲಾಗಿತ್ತು.
ಲಂಗ್ಡಾ ಆಜಂನ ಭಾವ ಇಮ್ರಾನ್ ಯಾನೆ ಬಿರಿಯಾನಿ ಇಮ್ರಾನ್ ವಿರುದ್ಧ ಸಿಸಿಬಿ ಪೊಲೀಸರು ಒಂದೂವರೆ ತಿಂಗಳ ಹಿಂದೆ ಡಕಾಯಿತಿಗೆ ಸಿದ್ಧತೆ ಆರೋಪದ ಅಡಿ ಪ್ರಕರಣ ದಾಖಲಿಸಿ ಅದನ್ನು ಜೆಜೆ ನಗರ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದರು. ನ್ಯಾಯಾಂಗ ಬಂಧನದಲ್ಲಿರುವ ಇಮ್ರಾನ್‌ನನ್ನು ಬಿಡಿಸಿಕೊಳ್ಳಲು ಆರೋಪಿಗಳ ಬಳಿ ಹಣ ಇರಲಿಲ್ಲ. ಹೀಗಾಗಿ ಪೆಟ್ರೋಲ್ ಬಂಕ್‌ನ ಕ್ಯಾಷಿಯರ್ ಬಳಿ ಇದ್ದ ಹಣ ದೋಚಲು ಮುಂದಾಗಿದ್ದರು.
ಗುರುತು ಸಿಗಬಾರದೆಂದು ಹೆಲ್ಮೆಟ್ ಧರಿಸಿದ್ದ ಆರೋಪಿಗಳು ಬಂಕ್‌ಗೆ ಹೋದ ತಕ್ಷಣವೇ ಬೆನ್ನ ಹಿಂದೆ ಅವಿತಿಟ್ಟುಕೊಂಡಿದ್ದ ಮಾರಕಾಸ್ತ್ರಗಳಿಂದ ಕ್ಯಾಷಿಯರ್‌ಗೆ ಬೆದರಿಸಿ ಹಣ ದೋಚಲು ಮುಂದಾಗಿದ್ದರು. ಕ್ಯಾಷಿಯರ್ ಕೂಗಿಕೊಂಡ ತಕ್ಷಣವೇ ಬಂಕ್‌ನಲ್ಲಿದ್ದ ಸಿಬ್ಬಂದಿ ಓಡಿ ಬಂದಿದ್ದರು. ಇದನ್ನು ನೋಡಿದ್ದ ಇಬ್ಬರೂ ಅಲ್ಲಿಂದ ಪರಾರಿಯಾಗಿದ್ದರು. ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಅದರಲ್ಲಿ ಆರೋಪಿಯೊಬ್ಬ ಕುಂಟುತ್ತಾ ಓಡುವುದು ಕಂಡುಬಂದಿತ್ತು. ಅದರ ಆಧಾರದಲ್ಲಿ ಆಜಂನನ್ನು ಬಂಧಿಸಲಾಯಿತು. ಆತನನ್ನು ವಿಚಾರಿಸಿದಾಗ ರಮೀಜ್ ಕೂಡ ಕೃತ್ಯದಲ್ಲಿ ಭಾಗಿಯಾಗಿದ್ದ ವಿಚಾರ ಬಾಯ್ಬಿಟ್ಟಿದ್ದ’ ಎಂದು ಪೊಲೀಸರು ಮಾಹಿತಿ ನೀಡಿದರು.