ಬೆಳಗಾವಿ: ಭೂ ಸುಧಾರಣೆ, ಎಪಿಎಂಸಿ ಮತ್ತು ಜಾನುವಾರು ಕಾಯ್ದೆಗಳಿಗೆ ರಾಜ್ಯ ಸರ್ಕಾರವು 2020ರಲ್ಲಿ ತಂದಿರುವ ರೈತ ವಿರೋಧಿ ತಿದ್ದುಪಡಿಗಳನ್ನು ಕೂಡಲೇ ರದ್ದುಗೊಳಿಸುವಂತೆ ಆಗ್ರಹಿಸಿ, ಸಂಯುಕ್ತ ಹೋರಾಟ- ಕರ್ನಾಟಕ ವತಿಯಿಂದ ಇಲ್ಲಿನ ಗೋಕಾಕ ರಸ್ತೆಯ ಸಂಕಲ್ಪ ಗಾರ್ಡನ್ನಲ್ಲಿ ರೈತ ಅಧಿವೇಶನ ಆರಂಭವಾಗಿದೆ.
ಪರ್ಯಾಯ ಕೃಷಿ ಧೋರಣೆಗಾಗಿ ಹಾಗೂ ವಿಧಾನಮಂಡಲ ಚಳಿಗಾಲದ ಅಧಿವೇಶನಕ್ಕೆ ಪೂರ್ವಭಾವಿಯಾಗಿ ಅಧಿವೇಶನ ನಡೆಯುತ್ತಿದೆ.
ಸಾಹಿತಿ ಅಲ್ಲಮಪ್ರಭು ಬೆಟ್ಟದೂರ ಅಧಿವೇಶನದ ಸಭಾಪತಿಯಾಗಿದ್ದಾರೆ. ಸಂಯುಕ್ತ ಕಿಸಾನ್ ಮೋರ್ಚಾದ ಮುಖಂಡ ಅಶೋಕ್ ಧವಳೆ, ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಸಾಮಾಜಿಕ ಕಾರ್ಯಕರ್ತ ಎಸ್.ಆರ್. ಹಿರೇಮಠ,ವಿವಿಧ ಸಂಘಟನೆಗಳ ಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್, ಬಿ.ಆರ್. ಪಾಟೀಲ, ಸಿದಗೌಡ ಮೋದಗಿ, ಚಾಮರಸ ಮಾಲಿಪಾಟೀಲ, ಪ್ರಕಾಶ ಕಮ್ಮರಡಿ, ಬಿ.ಎ. ಸೊಪ್ಪಿನ, ದಿವಾಕರ, ದೇವಿ ಮೊದಲಾದವರು ಪಾಲ್ಗೊಂಡಿದ್ದಾರೆ.
ಕೇಂದ್ರ ಸರ್ಕಾರವು ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದಿದ್ದನ್ನು ಸ್ವಾಗತಿಸಿ ಸಂಭ್ರಮಿಸಲಾಯಿತು. ನೆರೆದಿದ್ದವರಿಗೆ ಕುಂದಾ ಹಂಚಲಾಯಿತು. ಕೇಂದ್ರದಂತೆ ರಾಜ್ಯ ಸರ್ಕಾರವೂ ಚಳಿಗಾಲದ ಅಧಿವೇಶನದಲ್ಲೇ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂದು ಹಕ್ಕೊತ್ತಾಯ ಮಂಡಿಸಲಾಯಿತು. ದೆಹಲಿಯ ಗಡಿಗಳಲ್ಲಿ ನಡೆದ ಮಾದರಿಯಲ್ಲೇ ರಾಜ್ಯದಲ್ಲೂ ಅನಿರ್ದಿಷ್ಟಾವಧಿ ಹೋರಾಟ ಆರಂಭಿಸಲಾಗುವುದು ಎಂಬ ಸಂಕಲ್ಪವನ್ನು ನೆರೆದಿದ್ದವರು ಮಾಡಿದರು.
ಕೇಂದ್ರ ಹಾಗೂ ರೈತ ಸರ್ಕಾರಗಳ ರೈತರು ಮತ್ತು ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.