ಟೊಕಿಯೊ: ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಪುರುಷರ ಜಾವಲಿನ್ ಥ್ರೋ ಸ್ಪರ್ಧೆಯಲ್ಲಿ ಈಟಿಯನ್ನು ಬರೋಬ್ಬರಿ 87.65 ಮೀ ದೂರ ಎಸೆಯುವ ಮೂಲಕ ನೀರಜ್ ಚೋಪ್ರಾ ಭಾರತಕ್ಕೆ ಮೊದಲ ಚಿನ್ನ ತಂದು ಕೊಟ್ಟು ಇತಿಹಾಸ ನಿರ್ಮಿಸಿದ್ದಾರೆ. 121 ವರ್ಷಗಳ ನಂತರ ಭಾರತಕ್ಕೆ ಒಲಿಂಪಿಕ್ಸ್‌ನಲ್ಲಿ ಮೊದಲ ಭಾರಿಗೆ ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಪದಕ ಲಭಿಸಿದೆ. ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ 1900 ರಲ್ಲಿ ನಾರ್ಮನ್ ಪ್ರಿಚಾರ್ಡ್ ಅವರು ಪಡೆದ ಪದಕವೆ ಭಾರತಕ್ಕೆ ಕೊನೆಯದ್ದಾಗಿತ್ತು.
ಆಟದ ಮೊದಲ ಪ್ರಯತ್ನದಲ್ಲಿಯೇ 87.03 ಮೀಟರ್ ಎಸೆದ ಅವರು, ಎರಡನೇ ಪ್ರಯತ್ನದಲ್ಲಿ 87.65 ಮೀ ದೂರ ಎಸೆದು ದಾಖಲೆ ನಿರ್ಮಿಸಿದರು. ಚೆಕ್ ರಿಪಬ್ಲಿಕ್‌ನ ವಿ.ವೆಸ್ಲಿ 86.67 ಮೀಟರ್ ದೂರ ಎಸೆದು ಬೆಳ್ಳಿ ಗೆದ್ದರೆ, ಜರ್ಮನಿಯ ಜೆ.ವೆಬರ್ 85.30 ಎಸೆದು ಕಂಚು ತನ್ನದಾಗಿಸಿಕೊಂಡರು. 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ 10ಮೀ ಏರ್ ರೈಫಲ್ ವಿಭಾಗದಲ್ಲಿ ಭಾರತದ ಅಭಿನವ್ ಬಿಂದ್ರಾ ಅವರು ಚಿನ್ನ ಗೆದ್ದದ್ದೆ ಭಾರತಕ್ಕೆ ಕಡೆಯ ಚಿನ್ನವಾಗಿತ್ತು. ಒಂದೇ ಒಲಿಂಪಿಕ್ಸ್‌ನಲ್ಲಿ ಅತಿ ಹೆಚ್ಚು ಪದಕ ಗೆದ್ದಿದ್ದು 2012 ರ ಲಂಡನ್‌ನಲ್ಲಾಗಿತ್ತು. ಆಗ ಭಾರತ 6 ಪದಕಗಳನ್ನು ತನ್ನದಾಗಿಸಿಕೊಂಡಿತ್ತು. ಆಗ ಎರಡು ಬೆಳ್ಳಿ ಮತ್ತು ನಾಲ್ಕು ಕಂಚು ಭಾರತದ ಪಾಲಿಗಿತ್ತು. ಆದರೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ಮೊದಲ ಬಾರಿಗೆ 7 ಪದಕ ಗೆದ್ದಿದೆ. ಒಂದು ಚಿನ್ನ, ಎರಡು ಬೆಳ್ಳಿ, ನಾಲ್ಕು ಕಂಚು ತನ್ನದಾಗಿಸಿಕೊಂಡಿದೆ.
24 ವರ್ಷದ ನೀರಜ್ ಚೋಪ್ರಾ ಅವರು ಮೂಲತಃ ಹರ್ಯಾಣದ ಪಾಣಿಪತ್ ಜಿಲ್ಲೆಯ ಖಂದ್ರಾ ಎಂಬ ಹಳ್ಳಿಯವರು. 2016ರಲ್ಲಿ ಮೊದಲ ಬಾರಿಗೆ ಭಾರತವನ್ನು ಪ್ರತಿನಿಧಿಸಿ, ಐಎಎಎಫ್ (ಇಂಟರ್ ನ್ಯಾಷನಲ್ ಅಸೋಸಿಯೇಶನ್ ಆಫ್ ಅತ್ಲೆಟಿಕ್ಸ್ ಫೆಡರೇಶನ್) ಕಿರಿಯರ ವಿಶ್ವ ಕ್ರೀಡಾಕೂಟದಲ್ಲಿ ಗೆದ್ದು ಚಾಂಪಿಯನ್ ಆಗಿ ಮಿಂಚಿದ್ದರು. 2018ರ ಏಷ್ಯನ್ ಗೇಮ್ಸ್ ಮತ್ತು ಕಾಮನ್‌ವೆಲ್ತ್‌ನಲ್ಲಿ ಭಾಗವಹಿಸಿದ್ದ ಇವರು ಎರಡೂ ಕ್ರೀಡಾ ಕೂಟದಲ್ಲಿಯೂ ಜಾವೆಲಿನ್ ಥ್ರೋ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಏಷ್ಯನ್ ಗೇಮ್ಸ್‌ನಲ್ಲಿ 88.06 ಮೀ ದೂರ ಜಾವೆಲಿನ್ ಎಸೆದು ರಾಷ್ಟ್ರೀಯ ದಾಖಲೆ ಬರೆದಿದ್ದಾರೆ. 2018ರ ಏಷ್ಯನ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಬಾವುಟ ಹಿಡಿದು ಭಾರತದ ಕ್ರೀಡಾಳುಗಳನ್ನು ಪ್ರತಿನಿಧಿಸುವ ಅವಕಾಶವೂ ಇವರಿಗೆ ದಕ್ಕಿದ್ದು, ಇವರಿಗೆ ಮತ್ತೊಂದು ಹಿರಿಮೆಯನ್ನು ತಂದುಕೊಟ್ಟಿತ್ತು.
2017ರ ಏಷ್ಯನ್ ಅತ್ಲೆಟಿಕ್ ಚಾಂಪಿಯನ್ ಶಿಪ್ಸ್ ನಲ್ಲಿ ನೀರಜ್ 85.23 ಮೀ. ಜಾವೆಲಿನ್ ಎಸೆದು ಸ್ವರ್ಣ ಪದಕ ಪಡೆದಿದ್ದಾರೆ. 2018ರ ಮೇ ತಿಂಗಳಲ್ಲಿ ನಡೆದ ದೋಹ ಡೈಮಂಡ್ ಲೀಗ್ ಪಂದ್ಯದಲ್ಲಿ ಭಾಗವಹಿಸಿ 87.43 ಮೀ. ಜಾವೆಲಿನ್ ಎಸೆಯುವುದರೊಂದಿಗೆ ಹಳೆಯ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದಾರೆ. ಫಿನ್ ಲ್ಯಾಂಡಿನ ಲ್ಯಾಪಿನ್ಲಾಟಿಯಲ್ಲಿ ನಡೆದ ‘ಸಾವೋ ಗೇಮ್ಸ್’ನಲ್ಲಿ ನೀರಜ್ ಸ್ವರ್ಣ ಪದಕ ಪಡೆದಿದ್ದಾರೆ.