ರಾಯಚೂರು: ನಗರದಲ್ಲಿ ಕೆಲವು ರಸ್ತೆಗಳನ್ನು ಪೊಲೀಸರು ಬ್ಯಾರಿಕೇಡ್ ಹಾಕಿ ಬಂದ್ ಮಾಡಿದ್ದು, ಪರ್ಯಾಯ ಮಾರ್ಗದಲ್ಲಿ ವಾಹನಗಳು ಸಂಚರಿಸುವಂತಾಗಿದೆ.
ಲಾಕ್ ಡೌನ್ ಅವಧಿಯಲ್ಲಿದ್ದ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಿರುವ ಪೊಲೀಸರು, ಸಕಾರಣವಿಲ್ಲದೆ ಸಂಚರಿಸಲು ಯಾರನ್ನು ಬಿಡುತ್ತಿಲ್ಲ. ಅನಗತ್ಯ ಸಂಚಾರಿಗಳ ಬೈಕ್ ವಶಕ್ಕೆ ಪಡೆಯಲಾಗುತ್ತಿದೆ.
ನಗರದ ಬಸವೇಶ್ವರ ವೃತ್ತ, ರಂಗಮಂದಿರ ರಸ್ತೆ ಸೇರಿದಂತೆ ಹಲವು ಕಡೆ ಸಂಪೂರ್ಣ ಬ್ಯಾರಿಕೇಡ್ ಅಳವಡಿಸಲಾಗಿದೆ. ಸರ್ಕಾರಿ ಬಸ್ ಕೂಡಾ ನಗರದಲ್ಲಿ ಸುತ್ತುವರಿದು ಸಂಚರಿಸುತ್ತಿವೆ. ಜನರು ವಿವಿಧ ಊರುಗಳಿಗೆ ಸಂಚರಿಸುವುದಕ್ಕೆ ಅವಕಾಶ ಇದ್ದರೂ, ಕೇಂದ್ರ ಬಸ್ ನಿಲ್ದಾಣದಲ್ಲಿ ಎಂದಿನಂತೆ ಜನಸಂದಣಿ ಇಲ್ಲ. ಬೆರಳೆಣಿಕೆಯಷ್ಟು ಪ್ರಯಾಣಿಕರೊಂದಿಗೆ ಬಸ್ ಗಳು ಸಂಚರಿಸುತ್ತಿವೆ.
ಜಿಲ್ಲೆಯ ತಾಲ್ಲೂಕು ಕೇಂದ್ರಗಳಲ್ಲಿ ಮಾತ್ರ ಜನರು ಹಾಗೂ ವಾಹನಗಳ ಸಂಚಾರ ಎಂದಿನಂತಿಲ್ಲ. ಇನ್ನುಳಿದಂತೆ ಹೋಬಳಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನರು ಮತ್ತು ವಾಹನಗಳ ಓಡಾಟ ಎಂದಿನಂತಿದೆ.
ಹೋಟೆಲ್, ರೆಸ್ಟಾರೆಂಟ್ ತೆರೆದುಕೊಂಡಿದ್ದರೂ ಗ್ರಾಹಕರಿಲ್ಲ. ಪಾರ್ಸಲ್ ನೀಡುವುದಕ್ಕೆ ಅವಕಾಶ ಇದೆ. ಆದರೆ ಪಾರ್ಸಲ್ ಗಾಗಿ ಜನರು ಹೊರಬರುವುದಕ್ಕೆ ನಿರ್ಬಂಧಿಸಲಾಗುತ್ತಿದೆ. ತಮ್ಮ ಬಡಾವಣೆಗಳಲ್ಲಿರುವ ಹೋಟೆಲ್ ಗಳಿಗೆ ತೆರಳುವುದಕ್ಕೆ ಅವಕಾಶವಿದೆ.