ಬೆಂಗಳೂರು: ಜೆ.ಪಿ.ನಗರದ ಆಲಹಳ್ಳಿಯಲ್ಲಿ ಒತ್ತುವರಿಯಾಗಿದ್ದ 4 ಎಕರೆ 20 ಗುಂಟೆ ಸ್ವತ್ತನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಗುರುವಾರ ಸ್ವಾಧೀನಪಡಿಸಿಕೊಂಡಿದೆ. ಒತ್ತುವರಿಯಾಗಿದ್ದ ಜಾಗದಲ್ಲಿ ಅನಧಿಕೃತವಾಗಿ ನಿರ್ಮಾಣವಾಗಿದ್ದ 40 ಶೆಡ್‌ಗಳನ್ನು ಪ್ರಾಧಿಕಾರವು ನೆಲಸಮ ಮಾಡಿದೆ.
ಆಲಹಳ್ಳಿಯ ಸರ್ವೇ ನಂಬರ್ 5/7, 6/1, 6/4, 6/5, 7/2, 3, 4 ಮತ್ತು 8ರಲ್ಲಿ ಬಿಡಿಎ ಜಾಗ ಒತ್ತುವರಿ ಮಾಡಿ ಶೆಡ್‌ಗಳನ್ನು ನಿರ್ಮಿಸಲಾಗಿತ್ತು. ಶೆಡ್‌ಗಳನ್ನು ತೆರವುಗೊಳಿಸಲಾದ ಜಾಗದ ಮೌಲ್ಯ ಸುಮಾರು ₹ 100 ಕೋಟಿ ಎಂದು ಅಂದಾಜಿಸಲಾಗಿದೆ.
ಜೆ.ಪಿ.ನಗರ ಬಡಾವಣೆಯ 9 ನೇ ಹಂತದ ನಿರ್ಮಾಣಕ್ಕೆಂದು 1988 ರಲ್ಲಿ ಈ ಜಾಗ ಸ್ವಾಧೀನಪಡಿಸಿಕೊಳ್ಳಲು ಬಿಡಿಎ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. 1997 ರಲ್ಲಿ ಅಂತಿಮ ಅಧಿಸೂಚನೆ ಹೊರಡಿಸಿ ಜಾಗವನ್ನು ಸ್ವಾಧೀನಕ್ಕೆ ಪಡೆದಿತ್ತು. ಕೆಲವರು ತಾತ್ಕಾಲಿಕವಾಗಿ ಶೆಡ್‌ಗಳನ್ನು ನಿರ್ಮಿಸಿ ಆ ಜಾಗ ತಮ್ಮದೆಂದು ಪ್ರತಿಪಾದಿಸಿದ್ದರು. ಈ ಕುರಿತ ವ್ಯಾಜ್ಯದಲ್ಲಿ ನ್ಯಾಯಾಲಯವು ಬಿಡಿಎ ಪರವಾಗಿ ಇತ್ತೀಚೆಗೆ ತೀರ್ಪು ನೀಡಿತ್ತು. ಒತ್ತುವರಿಯಾದ ಜಾಗವನ್ನು ಮತ್ತೆ ಸುಪರ್ದಿಗೆ ಪಡೆಯುವಂತೆಯೂ ಆದೇಶ ಮಾಡಿತ್ತು.
ನ್ಯಾಯಾಲಯದ ಆದೇಶದ ಮೇರೆಗೆ ಬಿಡಿಎ ಅಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿ ಭಾಸ್ಕರ್, ಡಿವೈಎಸ್ ಪಿ ರವಿಕುಮಾರ್ ಸೇರಿದಂತೆ 75 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯ ಭದ್ರತೆಯಲ್ಲಿ ಶೆಡ್ ಗಳನ್ನು ತೆರವುಗೊಳಿಸಿದರು.
ಅತಿಕ್ರಮಣ ತೆರವು ಕುರಿತು ಪ್ರತಿಕ್ರಿಯಿಸಿದ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ‘ಒತ್ತುವರಿ ಮಾಡಿದವರು ಎಷ್ಟೇ ಪ್ರಭಾವಿಗಳಾಗಿದ್ದರೂ ಬಿಡುವುದಿಲ್ಲ. ಸ್ವಾಧೀನಪಡಿಸಿಕೊಂಡ ಜಮೀನನ್ನು ಹಂತಹಂತವಾಗಿ ನಿವೇಶನಗಳನ್ನಾಗಿ ಅಭಿವೃದ್ಧಿಪಡಿಸಿ ಹರಾಜಿನ ಮೂಲಕ ಹಂಚಿಕೆ ಪ್ರಕ್ರಿಯೆ ನಡೆಸಲಾಗುತ್ತದೆ’ ಎಂದು ತಿಳಿಸಿದರು.