ಬೆಳಗಾವಿ: ‘ಧನಾತ್ಮಕ ವಿಚಾರಗಳನ್ನು ಇಟ್ಟುಕೊಂಡು ವಿಧಾನಪರಿಷತ್ ಚುನಾವಣೆ ಎದುರಿಸುತ್ತಿದ್ದೇವೆ. ವಿರೋಧ ಪಕ್ಷದವರ ಟೀಕೆಗಳಿಗೆ ಈಗ ಪ್ರತಿಕ್ರಿಯಿಸುವುದಿಲ್ಲ’ ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.
ಇಲ್ಲಿ ಪತ್ರಕರ್ತರೊಂದಿಗೆ ಮಂಗಳವಾರ ಮಾತನಾಡಿದ ಅವರು, ‘ತಮ್ಮ ಚನ್ನರಾಜ ಹಟ್ಟಿಹೊಳಿ ನಾಮಪತ್ರ ಸಲ್ಲಿಸಿದ್ದಾರೆ. ಇದಕ್ಕೂ ಮುನ್ನ ಮಹಾಲಕ್ಷ್ಮಿ ದೇವಿ ದರ್ಶನ ಪಡೆದಿದ್ದೇವೆ. ಯಾವುದೇ ಕಾರ್ಯಕ್ಕೆ ಮುನ್ನ ದೇವರಲ್ಲಿ ಪ್ರಾರ್ಥನೆ ಮಾಡುವುದು ಹಿಂದೂ ಸಂಪ್ರದಾಯ. ಆದ್ದರಿಂದ ಮಹಾಲಕ್ಷ್ಮಿ ಹಾಗೂ ಹಿಂಡಲಗಾದಲ್ಲಿ ವಿನಾಯಕನಿಗೆ ಪೂಜೆ ಸಲ್ಲಿಸಿದ್ದೇವೆ’ ಎಂದರು.
‘ಹಿಂದುತ್ವ ಹಾಗೂ ಭಾರತೀಯ ಸಂಸ್ಕೃತಿ ಉಳಿಯಬೇಕಾದರೆ ಬಿಜೆಪಿಗೆ ಮತ ಹಾಕಿ’ ಎಂಬ ಬಿಜೆಪಿ ಗ್ರಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಹೇಳಿಕೆಗೆ, ‘ಆ ಬಗ್ಗೆ ಮುಂದಿನ ದಿನಗಳಲ್ಲಿ ಪ್ರತಿಕ್ರಿಯಿಸುತ್ತೇನೆ. ನನ್ನದು ಮನುಷ್ಯತ್ವದ ಸಂಸ್ಕೃತಿ. ನೆಲದ ಸಂಸ್ಕೃತಿ ಏನು ಕಲಿಸಿದೆಯೋ ಅದನ್ನು ಅಳವಡಿಸಿಕೊಂಡಿದ್ದೇನೆ; ಮುಂದುವರಿಸುತ್ತೇನೆ’ ಎಂದು ಹೇಳಿದರು.