ಚಿತ್ರದುರ್ಗ: ತಾಲ್ಲೂಕಿನ ದೊಡ್ಡಸಿದ್ದವ್ವನಹಳ್ಳಿ ಸಮೀಪದ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಗ್ಯಾಸ್ ಟ್ಯಾಂಕರ್ ಡಿಕ್ಕಿ ಹೊಡೆದು ನಾಲ್ವರು ಮೃತಪಟ್ಟಿದ್ದಾರೆ.
ರಾಯಚೂರಿನ ಹುಲುಗಪ್ಪ, ಕುಷ್ಟಗಿಯ ಮಂಜುನಾಥ, ವಿಜಯಪುರದ ಸಂಜಯ್, ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಲಾರಿ ಚಾಲಕ ಶರಣಪ್ಪ ಮೃತಪಟ್ಟವರು.
ಗದಗ ಜಿಲ್ಲೆಯ ರೋಣ ತಾಲ್ಲೂಕಿನಿಂದ ಬೆಂಗಳೂರಿಗೆ ಈರುಳ್ಳಿ ಸಾಗಣೆ ಮಾಡುತ್ತಿದ್ದ ಲಾರಿ ದೊಡ್ಡಸಿದ್ದವ್ವನಹಳ್ಳಿ ಸಮೀಪ ಪಂಚರ್ ಆಗಿದೆ. ಹೆದ್ದಾರಿ ಬದಿಯಲ್ಲಿ ಲಾರಿ ನಿಲುಗಡೆ ಮಾಡಿ ಪಂಚರ್ ಹಾಕುತ್ತಿದ್ದ ಸಂದರ್ಭದಲ್ಲಿ ವೇಗವಾಗಿ ಹಿಂಬದಿಯಿಂದ ಬಂದ ಟ್ಯಾಂಕರ್ ಡಿಕ್ಕಿ ಹೊಡೆದಿದೆ. ಅಪಘಾತ ಭೀಕರವಾಗಿ ನಡೆದಿದ್ದು, ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈರುಳ್ಳಿ ರಸ್ತೆಯಲ್ಲಿ ಬಿದ್ದಿವೆ. ಲಾರಿ ಸಂಪೂರ್ಣ ನಜ್ಜುಗುಜ್ಜಾಗಿದೆ.