Saturday, December 14, 2024
Homeಕಲ್ಯಾಣ ಕರ್ನಾಟಕರಾಯಚೂರುಡಾ.ಅಂಬೇಡ್ಕರ್ ಭಾವಚಿತ್ರ ತೆಗೆದಿಟ್ಟ ಘಟನೆ: ಜಡ್ಜ್ ವಜಾಕ್ಕೆ ಶಾಸಕ ಕೆ.ಶಿವನಗೌಡ ಒತ್ತಾಯ

ಡಾ.ಅಂಬೇಡ್ಕರ್ ಭಾವಚಿತ್ರ ತೆಗೆದಿಟ್ಟ ಘಟನೆ: ಜಡ್ಜ್ ವಜಾಕ್ಕೆ ಶಾಸಕ ಕೆ.ಶಿವನಗೌಡ ಒತ್ತಾಯ

ರಾಯಚೂರು: ಗಣರಾಜ್ಯೋತ್ಸ ದಿನದಂದು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅವಮಾನ ಮಾಡಿರುವ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರನ್ನು ಸೇವೆಯಿಂದ ವಜಾ ಮಾಡಬೇಕು ಎಂದು ಶಾಸಕ ಕೆ.ಶಿವನಗೌಡ ನಾಯಕ ಒತ್ತಾಯಿಸಿದ್ದಾರೆ.
ಈ ಕುರಿತು ಗುರುವಾರ ಮಾತನಾಡಿರುವ‌ ಅವರು, ನ್ಯಾಯಾಂಗ ಹುದ್ದೆಯಲ್ಲಿರುವವರು ಸಂವಿಧಾನ ಶಿಲ್ಪಿ ಅವರ ಭಾವಚಿತ್ರಕ್ಕೆ ಅವಮಾನಿಸುವ ಮೂಲಕ ವಿಕೃತಿ ಮನಸ್ಥಿತಿ ಮೆರೆದಿದ್ದಾರೆ. ಅಂಬೇಡ್ಕರ್ ಅವರ ಭಾವಚಿತ್ರವಿದ್ದರೆ ಧ್ವಜಾರೋಹಣ ಮಾಡುವುದಿಲ್ಲ ಎಂದು ಉಡಾಫೆಯಾಗಿ ಮಾತನಾಡಿರುವುದು ನಾಗರಿಕ ಸಮಾಜ ತಲೆತಗ್ಗಿಸಬೇಕಾದ ಸಂಗತಿ ಎಂದರು.
ದೇಶಕ್ಕೆ ಸಂವಿಧಾನ ಬರೆದವರ ಬಗ್ಗೆ ಈ ರೀತಿ ಮಾಡಿರುವುದು ನಾಡಿನೆಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ. ಇದು ಅತ್ಯಂತ ನೋವಿನ ಸಂಗತಿಯಾಗಿದ್ದು ಮಾನವ ಕುಲಕ್ಕೆ ಅವಮಾನದ ವಿಚಾರ. ಹೀಗಾಗಿ ತಕ್ಷಣವೇ ಹೈಕೋರ್ಟ್ ನ್ಯಾಯಮೂರ್ತಿಗಳು ಮಧ್ಯ ಪ್ರವೇಶಿಸಿ ಇಂದಿನ ಆಧುನಿಕ ಕಾಲಘಟ್ಟದಲ್ಲೂ ಅಸ್ಪೃಶ್ಯತೆಯ ಮನೋಭಾವ ಉಳಿಸಿಕೊಂಡಿರುವ ಇವರನ್ನು ನ್ಯಾಯಾಂಗ ಇಲಾಖೆಯಿಂದ ವಜಾ ಮಾಡಬೇಕು ಹಾಗೂ ವಿಷಯದ ಕುರಿತು ನಾನು ಸರ್ಕಾರ, ಕಾನೂನು ಇಲಾಖೆಯ ಗಮನಕ್ಕೆ ತಂದು ಪತ್ರ ಬರೆಯುತ್ತೇನೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.