ಭಾರತದ ಸೌಹಾರ್ದದ ಪರಂಪರೆಗೆ ಕೊಳ್ಳಿ ಇಟ್ಟ ಘಟನೆಯೇ ಬಾಬರಿ ಮಸೀದಿ ಧ್ವಂಸ ಪ್ರಕರಣ. ಈ ಮಸೀದಿಯ ಧ್ವಂಸಕ್ಕೆ ಡಿಸೆಂಬರ್ 6ನ್ನೇ ಯಾಕೆ ಆಯ್ಕೆ ಮಾಡಿಕೊಳ್ಳಲಾಯಿತು ಎಂಬ ಬಗ್ಗೆ ಚರ್ಚೆಗಳು, ಚಿಂತನೆಗಳು ನಡೆದರೆ ಅದರ ಹಿಂದಿನ ಕುತಂತ್ರ ಅರ್ಥವಾಗಬಹುದು.
ಧ್ವನಿ ಇಲ್ಲದ ಎಲ್ಲರ ಧ್ವನಿಯಂತೆ ಕೆಲಸ ಮಾಡಿರುವ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಪರಿನಿರ್ವಾಣಗೊಂಡ ದಿನ ಡಿಸೆಂಬರ್ 6. ದಲಿತರ, ಹಿಂದುಳಿದ ವರ್ಗಗಳ, ಅಲ್ಪ ಸಂಖ್ಯಾತರ, ಎಲ್ಲ ವರ್ಗಗಳ ಮಹಿಳೆಯರ ಪರವಾಗಿ ಅಂಬೇಡ್ಕರ್ ಕೆಲಸ ಮಾಡಿದ್ದರೂ ಅವರನ್ನು ಪೂರ್ಣ ಪ್ರಮಾಣದಲ್ಲಿ ನೆನಪು ಇಟ್ಟುಕೊಂಡವರು ದಲಿತರು ಮಾತ್ರ. ಅವರ ಸ್ಮೃತಿಪಟಲದಲ್ಲಿ ಅಂಬೇಡ್ಕರ್ ಇರುವವರೆಗೆ ದಲಿತರನ್ನು ಹಿಂದುತ್ವದ ಪ್ರಯೋಗಶಾಲೆಯ ಕುರಿಗಳನ್ನಾಗಿ ಮಾಡಲು ಸಾಧ್ಯವಿಲ್ಲ ಎಂಬ ಅರಿವು ಸಂಘಪರಿವಾರಕ್ಕಿದ್ದಿದ್ದರಿಂದ ಅಂಬೇಡ್ಕರ್ ಜಾಗದಲ್ಲಿ ರಾಮಜನ್ಮಭೂಮಿಯನ್ನು ಕೂರಿಸುವ ಹುನ್ನಾರದಂತೆ ಡಿ.6 ಕಾಣುತ್ತದೆ.
ಬಾಬರಿ ಮಸೀದಿ ಒಡೆಯುವ ಮೂಲಕ ಮುಸ್ಲಿಮರಿಗೆ ಪಾಠ ಕಲಿಸಲಾಯಿತು ಎಂದು ಬಿಂಬಿಸುವ ಮೂಲಕ ದಲಿತರು, ಅಂಬೇಡ್ಕರ್ ರನ್ನು ತಿಳಿದುಕೊಂಡವರು ಜಾತಿ ತಾರತಮ್ಯದ ಶತ್ರು ಬದಲು ಅಂತರ್‌ಧರ್ಮೀಯ ಶತ್ರು ಮೇಲೆ ಮುಗಿಬೀಳುತ್ತಿರಲಿ ಎಂಬ ಉದ್ದೇಶವೂ ಇದರ ಹಿಂದೆ ಅಡಗಿದಂತೆ ಕಾಣುತ್ತಿದೆ.
ಹಿಂದೂ ಒಂದು ಎನ್ನುತ್ತಾ ಬಹುಸಂಖ್ಯಾತರ ತಲೆಯೊಳಗೆ ಹಿಂದುತ್ವದ ಅಫೀಮ್ ತುರುಕಲಾಗಿದೆ. ಇದರ ಪರಿಣಾಮ ಸಿಕ್ಕಸಿಕ್ಕಲ್ಲಿ ಹೋರಾಟದ ಹೆಸರಲ್ಲಿ ಜಗಳವಾಡುತ್ತಾ ಕೇಸುಗಳನ್ನು ಹಾಕಿಸಿಕೊಳ್ಳುತ್ತಾ ಇರುವವ ಸಂಖ್ಯೆ ಹೆಚ್ಚಾಗಿದೆ. ಒಂದು ಕಡೆ ಶಿಕ್ಷಣವಿಲ್ಲದೆ, ಶಿಕ್ಷಣವಿದ್ದು ಉದ್ಯೋಗವಿಲ್ಲದೆ ಅದರ ಮಧ್ಯೆ ಈ ಜಾತಿ/ಧರ್ಮವನ್ನು ತಲೆಯೊಳಗೆ ಇಟ್ಟುಕೊಂಡು ಯುವಕರು ತಮ್ಮ ಬದುಕನ್ನು ಹಾಳು ಮಾಡಿಕೊಂಡಿರುವ ಸಾವಿರಾರು ಉದಾಹರಣೆಗಳು ಕಣ್ಣಮುಂದಿದೆ.
ನಾವು ಗುಲಾಮಗಿರಿಯಿಂದ, ದಾಸ್ಯದ ಬದುಕಿನಿಂದ ಮುಕ್ತಿ ಪಡೆದು ಸ್ವತಂತ್ರವಾಗಿ ಎಲ್ಲ ಮನುಷ್ಯ ಜೀವಿಗಳು ಘನತೆ ಮತ್ತು ಗೌರವದಿಂದ ಬದುಕಲು ಸಂವಿಧಾನ ಅವಕಾಶ ನೀಡಿದೆ. ಅಂಥ ಸಂವಿಧಾನದ ಶಿಲ್ಪಿಯ ಪ್ರಭಾವವನ್ನು ತಗ್ಗಿಸಿದರೆ ಮಾತ್ರ ಸಂವಿಧಾನದ ಅರಿವನ್ನೂ ತಗ್ಗಿಸಬಹುದು. ಮತ್ತೆ ಮನೋದಾಸ್ಯಕ್ಕೆ ಒಳಗಾಗಿಸಬಹುದು ಎಂಬ ಕೆಟ್ಟ ಚಿಂತನೆಯೂ ಈ ಬಾಬರಿ ಮಸೀದಿ ಧ್ವಂಸದ ಹಿಂದೆ ಅಡಗಿದೆ. ಇದನ್ನೆಲ್ಲ ಯೋಚಿಸದೇ ನಾವು ವೈಯುಕ್ತಿಕ ಪ್ರತಿಷ್ಠೆ, ನಮ್ಮಲ್ಲಿರುವ ದುರಾಸೆಯಿಂದ ಪಕ್ಷಗಳಿಗೆ ಮಾರಾಟವಾಗುತ್ತಿದ್ದೇವೆ. ಮೂರು ಕೊಟ್ಟರೆ ಇತ್ತ, ಆರು ಕೊಟ್ಟರೆ ಅತ್ತ ಎಂದು ಓಲಾಡುತ್ತಾ ಸೈದ್ಧಾಂತಿಕ ಬದ್ಧತೆ ಮರೆಯುತ್ತಿದ್ದೇವೆ..
ಬಾಬರಿ ಮಸೀದಿ ಧ್ವಂಸದ ಮೂಲಕ ಸೌಹಾರ್ದಕ್ಕೆ ಕೊಳ್ಳಿ ಇಡುವ ಕೆಲಸವೇನೋ ಯಶಸ್ವಿಯಾಯಿತು. ಆದರೆ ಅಂಬೇಡ್ಕರ್‌ರನ್ನು ಜನರ ಮನಸ್ಸಿನಿಂದ ದೂರ ಮಾಡುವ ಕೆಲಸ ಯಶಸ್ವಿಯಾಗಲಿಲ್ಲ. ಈಗ ಅಂಬೇಡ್ಕರ್‌ರನ್ನೇ ಹೈಜಾಕ್ ಮಾಡಿದ್ದಾರೆ. ಅಂಬೇಡ್ಕರ್ ಯಾವ ವಿಚಾರಗಳನ್ನು ಇಟ್ಟು ಹೋರಾಟ ಮಾಡಿಕೊಂಡು ಬಂದರೋ ಅದಕ್ಕೆ ವಿರುದ್ಧ ಇರುವವರು ಇಂದು ಹೋದಲ್ಲಿ ಬಂದಲ್ಲಿ ಅಂಬೇಡ್ಕರ್‌ರನ್ನು ಹೊಗಳುತ್ತಾ ಜನರಿಗೆ ಮಂಕುಬೂದಿ ಎರಚುತ್ತಿದ್ದಾರೆ. ಅವರನ್ನು ಹೊಗಳುತ್ತಲೇ ಅವರ ಆಶಯಗಳನ್ನು ಮಣ್ಣುಪಾಲು ಮಾಡಲಾಗುತ್ತಿದೆ ಎಂಬುದು ಅರ್ಥವಾದ ದಿನ ಡಿ.6 ಅನ್ನೇ ಯಾಕೆ ಆಯ್ಕೆ ಮಾಡಿಕೊಳ್ಳಲಾಯಿತು ಎಂಬುದೂ ಅರ್ಥವಾಗಲಿದೆ.
ಜಬೀನಾಖಾನಂ
ಹೋರಾಟಗಾರ್ತಿ, ದಾವಣಗೆರೆ ನೆರಳು ಬೀಡಿ ಕಾರ್ಮಿಕರ ಯೂನಿಯನ್ ಅಧ್ಯಕ್ಷೆ