Saturday, December 14, 2024
Homeಸುದ್ದಿರಾಜ್ಯಡೆಂಗಿ: ರಾಜ್ಯದಲ್ಲಿ 5 ಮರಣ

ಡೆಂಗಿ: ರಾಜ್ಯದಲ್ಲಿ 5 ಮರಣ

ಬೆಂಗಳೂರು: ರಾಜ್ಯದಲ್ಲಿ ಡೆಂಗಿ ಜ್ವರ ಪೀಡಿತರಲ್ಲಿ ಐವರು ಮೃತಪಟ್ಟಿರುವುದು ದೃಢಪಟ್ಟಿದೆ. ಈವರೆಗೆ ಈ ಜ್ವರಕ್ಕೆ ಒಳಪಟ್ಟವರ ಸಂಖ್ಯೆ 5,185ಕ್ಕೆ ಏರಿಕೆಯಾಗಿದೆ.

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಡೆಂಗಿ ಪ್ರಕರಣಗಳು ವರದಿಯಾಗಿವೆ. 17 ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ಮೂರಂಕಿಯಲ್ಲಿದೆ. ಈ ವರ್ಷ ಮೊದಲ ಆರು ತಿಂಗಳ ಅವಧಿಯಲ್ಲಿ ಡೆಂಗಿ ನಿಯಂತ್ರಣದಲ್ಲಿತ್ತು. ಮಳೆ ಹೆಚ್ಚಳವಾದ ಬಳಿಕ ಈ ಜ್ವರಕ್ಕೆ ಒಳಪಡುವವರ ಸಂಖ್ಯೆ ಏರುಗತಿ ಪಡೆದುಕೊಂಡಿದೆ.

ಕಳೆದ ವರ್ಷ 3,823 ಮಂದಿಯಲ್ಲಿ ಡೆಂಗಿ ಜ್ವರ ಕಾಣಿಸಿಕೊಂಡಿತ್ತು. ಅವರಲ್ಲಿ 5 ಮಂದಿ ಮೃತಪಟ್ಟಿದ್ದರು.

ಈ ವರ್ಷ ಬೆಂಗಳೂರಿನಲ್ಲಿ ಅತೀ ಹೆಚ್ಚು ಪ್ರಕರಣಗಳು ದೃಢಪಟ್ಟಿದ್ದು, 971 ಮಂದಿ ಡೆಂಗಿ ಜ್ವರ ಎದುರಿಸಿದ್ದಾರೆ. ಶಿವಮೊಗ್ಗದಲ್ಲಿ 381, ಕಲಬುರಗಿಯಲ್ಲಿ 369, ಉಡುಪಿಯಲ್ಲಿ 312, ಕೊಪ್ಪಳದಲ್ಲಿ 268, ದಾವಣಗೆರೆಯಲ್ಲಿ 245, ವಿಜಯಪುರದಲ್ಲಿ 237, ದಕ್ಷಿಣ ಕನ್ನಡದಲ್ಲಿ 231, ಬಳ್ಳಾರಿಯಲ್ಲಿ 227, ಹಾವೇರಿಯಲ್ಲಿ 198, ಮಂಡ್ಯದಲ್ಲಿ 188, ಗದಗದಲ್ಲಿ 184, ಚಿತ್ರದುರ್ಗದಲ್ಲಿ 152, ತುಮಕೂರಿನಲ್ಲಿ 143, ಯಾದಗಿರಿಯಲ್ಲಿ 142, ಬೀದರ್‌ನಲ್ಲಿ 128 ಹಾಗೂ ಕೋಲಾರದಲ್ಲಿ 113 ಮಂದಿ ಡೆಂಗಿ ಪೀಡಿತರಾಗಿದ್ದಾರೆ. ಉಳಿದ ಜಿಲ್ಲೆಗಳಲ್ಲಿ ಈ ಸಂಖ್ಯೆ 100ರ ಗಡಿಯೊಳಗೆ ಇವೆ.

ರಾಜ್ಯದ 28 ಜಿಲ್ಲೆಗಳಲ್ಲಿ ಚಿಕೂನ್‌ಗುನ್ಯಾ ಪ್ರಕರಣಗಳು ವರದಿಯಾಗಿವೆ. ಈವರೆಗೆ ಈ ಮಾದರಿಯ ಜ್ವರಕ್ಕೆ ಒಳಗಾದವರ ಸಂಖ್ಯೆ 1,621ಕ್ಕೆ ಏರಿಕೆಯಾಗಿದೆ.