Saturday, December 14, 2024
Homeಸುದ್ದಿರಾಜ್ಯತಾಯಿಯ ಅನೈತಿಕ ಸಂಬಂಧ ಪ್ರಶ್ನಿಸಿದ ಮಗಳನ್ನು ಬೆತ್ತಲು ಮಾಡಿ ದೌರ್ಜನ್ಯ

ತಾಯಿಯ ಅನೈತಿಕ ಸಂಬಂಧ ಪ್ರಶ್ನಿಸಿದ ಮಗಳನ್ನು ಬೆತ್ತಲು ಮಾಡಿ ದೌರ್ಜನ್ಯ

ಹುಬ್ಬಳ್ಳಿ: ತಾಯಿಯ ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ, ತಾಯಿ ಮತ್ತು ಅವಳ ದೊಡ್ಡಮ್ಮನ ಮಗ ಸೇರಿ ಮಗಳನ್ನು ಕೊಠಡಿಯಲ್ಲಿ ಬಲವಂತವಾಗಿ ಕೂಡಿಹಾಕಿ, ಬಟ್ಟೆ ತೆಗೆದು ವಿಡಿಯೊ ಮಾಡಿದ ಪ್ರಕರಣ ಹಳೇಹುಬ್ಬಳ್ಳಿಯ ಅಜ್ಮೀರನಗರದಲ್ಲಿ ನಡೆದಿದೆ.

ತಾಯಿ ಫರ್ಜಾನ್‌ ದೇಸಾಯಿ ಮತ್ತು ಮಹ್ಮದಗೌಸ್‌ ಕರ್ಜಗಿ ವಿರುದ್ಧ 20 ವರ್ಷದ ಯುವತಿ ಹಳೇಹುಬ್ಬಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಯುವತಿ ತಾಯಿ ಜೊತೆ ಬೆಳಗಾವಿಯಲ್ಲಿದ್ದಾಗ ಮಹ್ಮದಗೌಸ್‌ ಬಂದು, ಮಕ್ಕಳ ವಿದ್ಯಾಭ್ಯಾಸಕ್ಕೆ ಹುಬ್ಬಳ್ಳಿ ಯೋಗ್ಯ ಸ್ಥಳವಾಗಿದೆ ಎಂದು ಅವರನ್ನು ಹುಬ್ಬಳ್ಳಿಗೆ ಕರೆದುಕೊಂಡು ಬಂದಿದ್ದನು. ಯುವತಿಯ ತಂದೆ ಸೌದಿಯಲ್ಲಿ ಇರುವುದನ್ನು ತಿಳಿದು, ತಾಯಿ ಫರ್ಜಾನ್‌ ಜೊತೆ ಅನೈತಿಕ ಸಂಬಂಧ ಬೆಳೆಸಿ, ಅಶ್ಲೀಲ ವಿಡಿಯೊ ಮಾಡಿ ತಾಯಿಗೆ ಹೆದರಿಸಿ ಹಣ ಪಡೆಯುತ್ತಿದ್ದ. ಯುವತಿ ನಿಶ್ಚಿತಾರ್ಥ ಮಾಡಿಕೊಂಡ ಹುಡುಗನಿಂದ ₹5 ಲಕ್ಷ ಹಣ ತರಬೇಕು. ಇಲ್ಲದಿದ್ದರೆ, ತಾಯಿಯ ಅಶ್ಲೀಲ ವಿಡಿಯೊ ಮಾಡಿದ ಹಾಗೆ, ನಿನ್ನ ವಿಡಿಯೊ ಮಾಡಿ ನಿಶ್ಚಿತಾರ್ಥ ಮಾಡಿಕೊಂಡ ಹುಡುಗನಿಗೆ ಕಳುಹಿಸುತ್ತೇನೆ ಎಂದು ಬೆದರಿಸಿದ್ದ. ಈ ವಿಷಯ ಯುವತಿ ಅಜ್ಜಿ ಹಾಗೂ ತಂದೆಗೆ ತಿಳಿಸಿದ್ದರಿಂದ ಕೋಪಗೊಂಡ, ತಾಯಿ ಹಾಗೂ ಮಹ್ಮದಗೌಸ್‌, ತಮ್ಮ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದೀಯ, ನಾವಿಬ್ಬರೂ ಸೇರಿ ನಿನ್ನ ಬಾಳನ್ನು ಹಾಳು ಮಾಡುತ್ತೇವೆ ಎಂದು ಕೊಠಡಿಯಲ್ಲಿ ಕೂಡಿ ಹಾಕಿ ದೌರ್ಜನ್ಯ ನಡೆಸಿದ್ದಾರೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.

ಚಿನ್ನಾಭರಣ ಕಳವು: ಕೋರ್ಟ್‌ ವೃತ್ತದ ಬಳಿಯ ರೇವಣಕರ್‌ ಕಾಂಪ್ಲೆಕ್ಸ್‌ ಎದುರು ಧಾರವಾಡದ ಮಂಜುನಾಥ ಪಡಸಾಲಿ ಅವರು ನಿಲ್ಲಿಸಿದ್ದ ಕಾರಿನ ಹಿಂಭಾಗದ ಗಾಜು ಒಡೆದು, ಸೀಟಿನ ಮೇಲೆ ಇಟ್ಟಿದ್ದ 20 ಗ್ರಾಂ ತೂಕದ 80 ಸಾವಿರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ. ಉಪನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.