ಶಿವಮೊಗ್ಗ: . ತೀರ್ಥಹಳ್ಳಿ-ಬಾಳೇಬೈಲು ನಡುವಿನ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದ ಬಳಿಯಲ್ಲಿ ತಮ್ಮ ಮನೆಯನ್ನೇ ಹೋಟೆಲ್ ಆಗಿ ಪರಿವರ್ತಿಸಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಮೀನಿನ ಸವಿರುಚಿಯನ್ನು ಉಣಬಡಿಸುವ ಮೂಲಕ ಅನ್ವರ್ ಗಮನ ಸೆಳೆದಿದ್ದಾರೆ.
ಬಿಸಿಲಿನ ಬೇಗೆಯಿಂದ ತತ್ತರಿಸಿ ಹೋಗಿರುವ ಮಲೆನಾಡಿಗರ ಹೊಟ್ಟೆಯನ್ನು ತಂಪಾಗಿರಿಸುವುದಕ್ಕಾಗಿ ವಿವಿಧ ಮೀನಿನ ಖಾದ್ಯಗಳ ನಡುವೆ ಕುಚ್ಚಲಕ್ಕಿ ಗಂಜಿ ಊಟ ಇವರ ಹೋಟೆಲ್ಲಿನ ವಿಶೇಷತೆ.
6 ತಿಂಗಳ ಹಿಂದೆ ತಮ್ಮ ಮನೆಯನ್ನು ಹೋಟೆಲ್ ರೂಪಕ್ಕೆ ಪರಿವರ್ತಿಸಿ ‘ಬ್ರೈಟ್ ಹೋಟೆಲ್’ ಎಂದು ನಾಮಕರಣ ಮಾಡಿ ಉದ್ಯಮ ಆರಂಭಿಸಿದರು.
‘ಮನೆಯಲ್ಲಿ ಮೀನಿನ ಖಾದ್ಯವನ್ನು ರುಚಿಕಟ್ಟಾಗಿ ತಯಾರಿಸಿ ಉಣಬಡಿಸುತ್ತಿದ್ದ ಅನ್ವರ್ ಅವರ ಪತ್ನಿ ಬಿ.ಕಾಂ ಪದವೀಧರೆ ಹಮೀದಾ ಅವರನ್ನೇ ಮುಖ್ಯ ಬಾಣಸಿಗರನ್ನಾಗಿ ಮಾಡಲಾಯಿತು. ಸಂಸ್ಕರಿಸಿದ ಮೀನಿಗೆ ಹದವಾಗಿ ಉಪ್ಪು, ಖಾರ, ಹುಳಿ ಬೆರೆಸಿ ಮನೆಯಲ್ಲೇ ಸಿದ್ಧಪಡಿಸುವ ಮಸಾಲೆ ಬೆರೆಸಿ ಮಾಡುವ ಅಡುಗೆ ಶೈಲಿಯನ್ನೇ ಹೋಟೆಲ್‌ನಲ್ಲಿ ಗ್ರಾಹಕರಿಗೆ ನೀಡುತ್ತಿರುವುದರಿಂದ ಬೇಡಿಕೆ ಹೆಚ್ಚಾಗಿದೆ’ ಎನ್ನುತ್ತಾರೆ ಅನ್ವರ್ ಅವರ ಸೋದರ ಸಂಬಂಧಿ ನೂರ್ ಮಹಮದ್.
ಗ್ರಾಹಕರ ಅಭಿರುಚಿಯನ್ನು ಮನಗಂಡು ಅವರ ನಾಲಿಗೆ ಸವಿಯನ್ನು ಉದ್ದೀಪನಗೊಳಿಸುವ ಖಾದ್ಯದೊಂದಿಗೆ ವಿವಿಧ ಬಗೆಯ ಸಮುದ್ರ ಹಾಗೂ ಹೊಳೆ ಮೀನಿನ ಪದಾರ್ಥಗಳನ್ನು ಶುಚಿ, ರುಚಿಯಾಗಿ ಸಿದ್ಧಪಡಿಸಿ ಗ್ರಾಹಕರಿಗೆ ನೀಡಿ ಮೆಚ್ಚುಗೆ ಗಳಿಸಿದ್ದಾರೆ. ಆಗೊಮ್ಮೆ ಈಗೊಮ್ಮೆ ಇವರ ಹೋಟೆಲಿನಲ್ಲಿ ಕೋಳಿ ಮಾಂಸದ ಕುಂದಾಪುರ ಸುಕ್ಕ ಸಿದ್ಧವಾಗುತ್ತದೆ.
ಗ್ರಾಹಕರು ಮಧ್ಯಾಹ್ನವಾಗುತ್ತಿದ್ದಂತೆ ಬ್ರೈಟ್ ಹೋಟೆಲ್‌ನತ್ತ ಮುಖ ಮಾಡುತ್ತಾರೆ. ಬಾಳೆಎಲೆಯಲ್ಲಿ ಸಿಗಡಿ ಚಟ್ನಿ, ಪಾಂಫ್ರೆಟ್, ಡಿಸ್ಕೊ, ಕೊಡ್ಡಾಯಿ, ಅಂಜಲ್, ಸಿಲ್ವರ್ ಫಿಷ್, ಬಂಗಡೆ, ಕಾಟ್ಲ, ರೋಹು, ಗೌರಿ, ಔಲು ಮೀನಿನ ತವಾ ಫ್ರೈ, ಸಾರು ಮೀನು ಮಾದರಿಯ ಮನೆ ಊಟವನ್ನು ಸವಿಯುತ್ತಾರೆ.
ಗ್ರಾಹಕರು ನೀಡುವ ಹಣಕ್ಕೆ ಸರಿಹೊಂದುವ ಶುಚಿ ರುಚಿಯಾದ ಆಹಾರವನ್ನು ಪೂರೈಕೆ ಮಾಡಬೇಕು. ಆರೋಗ್ಯದ ಬಗ್ಗೆ ಹೆಚ್ಚು ನಿಗಾ ವಹಿಸುತ್ತಿರುವ ಈ ಕಾಲಮಾನದಲ್ಲಿ ಗ್ರಾಹಕರ ಆರೋಗ್ಯ ಕೆಡಿಸುವ ಪದಾರ್ಥದಿಂದ ದೂರ ಇರಬೇಕಾದ ಹೊಣೆಗಾರಿಕೆ ದೊಡ್ಡದು. ಇಂಥಹ ಸರಳ ಸೂತ್ರಗಳನ್ನು ನಮ್ಮ ಹೋಟೆಲ್‌ನಲ್ಲಿ ಪಾಲಿಸಲಾಗುತ್ತದೆ. ಸದ್ಯಕ್ಕೆ ಮಧ್ಯಾಹ್ನದ ಊಟಕ್ಕೆ ಮಾತ್ರ ವ್ಯವಸ್ಥೆ ಮಾಡಲಾಗಿದೆ ಎಂದು ಅನ್ವರ ತಿಳಿಸಿದರು.