ವಿಜಯನಗರ: ತುಂಗಭದ್ರಾ ಜಲಾಶಯದ ಬಲದಂಡೆ ಮೇಲ್ಮಟ್ಟದ ಕಾಲುವೆಗೆ (ಎಚ್‌ಎಲ್‌ಸಿ) ಜ. 11ರಿಂದ ನೀರು ಹರಿಸಲು ಕರ್ನಾಟಕ ನೀರಾವರಿ ನಿಗಮ ನಿರ್ಧರಿಸಿದೆ.
ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರೂ ಆದ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ನೀರು ಹರಿಸಲು ತೀರ್ಮಾನಿಸಲಾಗಿತ್ತು. ಅದರಂತೆ ನೀರು ಹರಿಸಲಾಗುವುದು ಎಂದು ಕರ್ನಾಟಕ ನೀರಾವರಿ ನಿಗಮ ಸೋಮವಾರ ತಿಳಿಸಿದೆ.
ಜ. 11ರಿಂದ 31ರ ವರೆಗೆ ನಿತ್ಯ 750 ಕ್ಯುಸೆಕ್ ನೀರು ಹರಿಸಲಾಗುತ್ತದೆ. ಫೆ. 1ರಿಂದ 10ರ ವರೆಗೆ ನೀರು ಹರಿಸುವುದು ನಿಲ್ಲಿಸಿ, ಪುನಃ ಫೆ. 11ರಿಂದ 28ರ ವರೆಗೆ ಬಿಡಲಾಗುತ್ತದೆ. ಮಾ. 1ರಿಂದ 10ರ ವರೆಗೆ ನೀರಿನ ಲಭ್ಯತೆ ನೋಡಿಕೊಂಡು ಹರಿಸಲಾಗುವುದು. ಬಲದಂಡೆ ಮೇಲ್ಮಟ್ಟದ ಕಾಲುವೆಯ ಅಚ್ಚುಕಟ್ಟು ಪ್ರದೇಶದ ರೈತರು ಬೆಳೆದು ನಿಂತಿರುವ ಬೆಳೆಗೆ ನೀರು ಉಪಯೋಗಿಸಿ ಬೆಳೆ ಸಂರಕ್ಷಿಸಬೇಕು. ಹೊಸದಾಗಿ ರೈತರು ಯಾವುದೇ ಬೆಳೆ ಬೆಳೆಯಬಾರದು ಎಂದು ನಿಗಮದ ಪ್ರಕಟಣೆ ಕೋರಿದೆ.