Saturday, December 14, 2024
Homeರಾಜ್ಯಮಧ್ಯ ಕರ್ನಾಟಕತ್ರಿಪುರದ ಕೋಮುಗಲಭೆ ವಿರೋಧಿಸಿ ದಾವಣಗೆರೆಯಲ್ಲಿ ಬೃಹತ್‌ ಪ್ರತಿಭಟನೆ

ತ್ರಿಪುರದ ಕೋಮುಗಲಭೆ ವಿರೋಧಿಸಿ ದಾವಣಗೆರೆಯಲ್ಲಿ ಬೃಹತ್‌ ಪ್ರತಿಭಟನೆ

ದಾವಣಗೆರೆ: ತ್ರಿಪುರ ರಾಜ್ಯದಲ್ಲಿ ಕೋಮುಗಲಭೆ ವೇಳೆ ಮಸೀದಿಗಳ ಮೇಲೆ ನಡೆದ ದಾಳಿಯನ್ನು ಖಂಡಿಸಿ ತಂಜಿಮುಲ್‌ ಮುಸ್ಲಿಮೀನ್‌ ಫಂಡ್‌ ಅಸೋಸಿಯೇಷನ್‌ ನೀಡಿದ ಕರೆಯಂತೆ ನಗರದ ಮುಸ್ಲಿಮರು ಶುಕ್ರವಾರ ತಮ್ಮ ಅಂಗಡಿಗಳನ್ನು ಮುಚ್ಚಿ ಪ್ರತಿಭಟಿಸಿದರು.

ಮಸೀದಿಗಳಲ್ಲಿ ಮಧ್ಯಾಹ್ನ ಪ್ರಾರ್ಥನೆ ಮುಗಿದ ಬಳಿಕ ಆಜಾದ್‌ನಗರ ಪೊಲೀಸ್‌ ಠಾಣೆ ಎದುರಿನ ಮಾಗಾನಹಳ್ಳಿ ರಸ್ತೆಯ ಮೈದಾನಕ್ಕೆ ನಗರದ ಮೂಲೆ ಮೂಲೆಗಳಿಂದ ಮುಸ್ಲಿಮರು ಸಾಗರೋಪಾದಿಯಲ್ಲಿ ಬಂದು ಸೇರಿದ್ದರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಮುಸ್ಲಿಮರು ತ್ರಿಪುರದ ಘಟನೆಯ ವಿರುದ್ಧ ಘೋಷಣೆಗಳನ್ನು ಕೂಗಿ, ಫಲಕಗಳನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.

ಬಾಂಗ್ಲಾ ದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆದ ದೌರ್ಜನ್ಯವನ್ನು ಖಂಡಿಸಿ ತ್ರಿಪುರದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯು ಕೋಮುಗಲಭೆಗೆ ಕಾರಣವಾಯಿತು. ಪ್ರತಿಭಟನಕಾರರು ಮಸೀದಿಗಳ ಮೇಲೆ, ಮುಸ್ಲಿಮರ ಅಂಗಡಿಗಳ ಮೇಲೆ ದಾಳಿ ನಡೆಸಿದರು. ಮಸೀದಿಯಲ್ಲಿದ್ದ ಧರ್ಮಗ್ರಂಥಗಳಿಗೆ ಬೆಂಕಿ ಹಚ್ಚಿಸಿದ್ದಾರೆ. ಇಂತಹ ಕೋಮುಗಲಭೆಗಳು ಜಾತಿ–ಧರ್ಮಗಳ ನಡುವೆ ನಡೆಯುತ್ತಿದ್ದರೆ ದೇಶದ ಪ್ರಗತಿಗೆ ಮಾರಕವಾಗಲಿದೆ ಎಂದು ಮುಸ್ಲಿಂ ಮುಖಂಡರು ಅಭಿಪ್ರಾಯಪಟ್ಟರು.

ತ್ರಿಪುರದಲ್ಲಿ ಪೊಲೀಸ್‌ ಇಲಾಖೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ಪ್ರಕರಣದ ಸತ್ಯಾಸತ್ಯತೆಯನ್ನು ತಿಳಿಯಲು ನ್ಯಾಯಾಂಗ ತನಿಖೆಗೆ ಆದೇಶಿಸಬೇಕು ಎಂದು ಮುಖಂಡರು ರಾಷ್ಟ್ರಪತಿಯನ್ನು ಒತ್ತಾಯಿಸಿದರು.

ದೇಶದಲ್ಲಿ ಕೆಲವರು ಅಧಿಕಾರದ ಚುಕ್ಕಾಣಿ ಹಿಡಿಯಲು ಧರ್ಮಗಳ ನಡುವೆ ವೈಷಮ್ಯ ಹುಟ್ಟಿಸುವ ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಯುವ ಜನತೆ ಪ್ರಚೋದನೆಗೆ ಒಳಗಾಗಿ ಹಿಂಸಾತ್ಮಕ ಕೃತ್ಯಗಳಿಗೆ ಕೈಹಾಕುತ್ತಿದ್ದಾರೆ. ಹಿಂಸಾತ್ಮಕ ಕೃತ್ಯಗಳಿಂದ ದೇಶದ ಜನರ ನೆಮ್ಮದಿ ಹಾಳಾಗುವುದರ ಜೊತೆಗೆ ಆಸ್ತಿ–ಜೀವಗಳಿಗೂ ಹಾನಿಯಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್‌ ಅವರಿಗೆ ಮುಸ್ಲಿಂ ಮುಖಂಡರು ಮನವಿ ಸಲ್ಲಿಸಿದರು.

ಮುಸ್ಲಿಂ ಮುಖಂಡರಾದ ಸಾದಿಕ್‌ ಪೈಲ್ವಾನ್‌, ಹನೀಫ್ ಮೌಲಾನಾ, ಆಯೂಬ್ ಪೈಲ್ವಾನ್, ಸಯ್ಯದ್ ಸೈಫುಲ್ಲಾ, ಅಮಾನುಲ್ಲಾ ಖಾನ್, ಅಬ್ದುಲ್ ಸಾಬ್ ಹಾಗೂ ತಂಜಿಮುಲ್‌ ಮುಸ್ಲಿಮೀನ್‌ ಫಂಡ್‌ ಅಸೋಸಿಯೇಷನ್‌ನ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.