Saturday, December 14, 2024
Homeಕರಾವಳಿ ಕರ್ನಾಟಕಉತ್ತರ ಕನ್ನಡದಾಂಡೇಲಿ: ಅಪರಿಚಿತನ ಶವ ಎಳೆದುಕೊಂಡು ಹೋದ ಮೊಸಳೆ

ದಾಂಡೇಲಿ: ಅಪರಿಚಿತನ ಶವ ಎಳೆದುಕೊಂಡು ಹೋದ ಮೊಸಳೆ



ದಾಂಡೇಲಿ: ನಗರದ ಕುಳಗಿ ರಸ್ತೆಯ ಕಾಳಿ ನದಿ ಸೇತುವೆ ಕೆಳಗೆ ಮೊಸಳೆ ಜೊತೆ ಅಪರಿಚಿತ ವ್ಯಕ್ತಿಯ ಶವ ಬುಧವಾರ ಕಂಡುಬಂದಿದೆ.

ಮೊಸಳೆಯು ಮೃತದೇಹವನ್ನು ಕೋಗಿಲಬನ ಗ್ರಾಮದ ಖಾಸಗಿ ರೆಸಾರ್ಟ್ ತನಕ ಎಳೆದುಕೊಂಡು ಹೋಗಿತ್ತು. ಶವವನ್ನು ಹೊರತರುವಲ್ಲಿ ಜಂಗಲ್ ಸಫಾರಿ ರ‌್ಯಾಫ್ಟಿಂಗ್ ತಂಡ ಹಾಗೂ ಪೋಲೀಸ್ ಸಿಬ್ಬಂದಿ ಸಹಕರಿಸಿದ್ದಾರೆ.

ವ್ಯಕ್ತಿಯ ಒಂದು ಕೈ ಹಾಗೂ ಒಂದು ಕಾಲು ಕಾಣೆಯಾಗಿದ್ದು, ಭಾಗಶಃ ಶವವು ಕೊಳೆತ ಸ್ಥಿತಿಯಲ್ಲಿದೆ. ಆಸ್ಪತ್ರೆಗೆ ಸಾಗಿಸಲು ಸಾಧ್ಯವಾಗದ ಕಾರಣ ನದಿಯ ದಡದಲ್ಲಿಯೇ ಮರಣೋತ್ತರ ಪರೀಕ್ಷೆಯನ್ನು ಕೈಗೊಳ್ಳಲಾಗಿದೆ.

ವ್ಯಕ್ತಿ ಗುರುತು ಪತ್ತೆ ಹಚ್ಚುವ ಸಂಬಂಧಿಸಿದಂತೆ ತಾಲ್ಲೂಕಿನ ಎಲ್ಲ ಪೊಲೀಸ್ ಠಾಣೆಗಳಿಗೆ ಮಾಹಿತಿಯನ್ನು ಕಳುಹಿಸಲಾಗಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಗ್ರಾಮೀಣ ಠಾಣೆಯ ಪಿ.ಎಸ್.ಐ ಐ.ಆರ್.ಗಡ್ಡೇಕರ ಹಾಗೂ ನಗರ ಠಾಣೆಯ ಕಿರಣ ಪಾಟೀಲ ಮಾಹಿತಿ ನೀಡಿದ್ದಾರೆ.

ವ್ಯಕ್ತಿಯು ಮೊಸಳೆ ದಾಳಿಗೆ ಒಳಾಗಿದ್ದರೋ, ಆತ್ಮಹತ್ಯೆಯೇ ಅಥವಾ ಕೊಲೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ. ಮೃತನ ಗುರುತು ಪತ್ತೆಹಚ್ಚುವ ಸಲುವಾಗಿ ಡಿ.ಎನ್.ಎ ಪರೀಕ್ಷೆ ಮಾಡಲಾಗುವುದು’ ಎಂದು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ತಹಶೀಲ್ದಾರ್ ಶೈಲೇಶ ಪರಮಾನಂದ, ಕೋಗಿಲೆಬನ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶೋಕ ನಾಯ್ಕ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.