Saturday, December 14, 2024
Homeಮಧ್ಯ ಕರ್ನಾಟಕದಾವಣಗೆರೆದಾವಣಗೆರೆಯಲ್ಲಿ ಪೊಲೀಸ್ ವಶದಲ್ಲಿದ್ದ ವ್ಯಕ್ತಿ ಸಾವು

ದಾವಣಗೆರೆಯಲ್ಲಿ ಪೊಲೀಸ್ ವಶದಲ್ಲಿದ್ದ ವ್ಯಕ್ತಿ ಸಾವು

ದಾವಣಗೆರೆ: ತಾಲ್ಲೂಕಿನ ಮಾಯಕೊಂಡ ಪೋಲಿಸ್ ಠಾಣೆಯಲ್ಲಿ ನಡೆದಿದ್ದ ಲಾಕಪ್ ಡೆತ್ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ನಡೆದೆ. ವಂಚನೆ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ವ್ಯಕ್ತಿ ಪೊಲೀಸರ ವಶದಲ್ಲಿ ಇರುವಾಗಲೇ ಮೃತಪಟ್ಟಿದ್ದಾರೆ.

ಚಿತ್ರದುರ್ಗ ತಾಲೂಕಿನ ಭರಮಸಾಗರ ಹೋಬಳಿಯ ಬಹದ್ದೂರ್‌ಘಟ್ಟ ಗ್ರಾಮದ ನಿವಾಸಿ ಕುಮಾರ್ (35 ) ಮೃತಪಟ್ಟವರು. ಮೃತ ಕುಮಾರ್ ವಿರುದ್ಧ ದಾವಣಗೆರೆಯ ಸಿಇಎನ್ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣವೊಂದು ದಾಖಲಾಗಿತ್ತು. ಕುಮಾರ್‌ ಅವರು ಚಿತ್ರದುರ್ಗದ ವಕೀಲರಾದ ಫಾತ್ಯರಾಜನ್‌ ಮತ್ತು ಪ್ರಕಾಶ್‌ ಅವರ ಜತೆಗೆ ಶನಿವಾರ ಸಂಜೆ ಚಿತ್ರದುರ್ಗದಲ್ಲಿ ಮಾತನಾಡಿದ್ದರು. ಬಳಿಕ ಅಲ್ಲಿಂದ ಮನೆಗೆಂದು ಹೊರಟಿದ್ದರು. ಈ ಸಂದರ್ಭದಲ್ಲಿ ದಾವಣಗೆರೆಯ ಸಿಇಎನ್ ಇನ್‌ಸ್ಪೆಕ್ಟರ್‌ ಗಿರೀಶ್‌ ಮತ್ತು ಸಿಬ್ಬಂದಿ ಕೊಟ್ರೇಶ್‌ ವಶಕ್ಕೆ ಪಡೆದಿದ್ದರು. ರಾತ್ರಿ ದಾವಣಗೆರೆಯ ಶ್ರೀ ಲಾಡ್ಜ್‌ಗೆ ಕರೆದುಕೊಂಡು ಬಂದಿದ್ದರು. ಬೆಳಿಗ್ಗೆ 10.30ಕ್ಕೆ ಜಿಲ್ಲಾ ಆಸ್ಪತ್ರೆಗೆ ಒಯ್ದಿದ್ದಾರೆ. ‘ಆಸ್ಪತ್ರೆಗೆ ಕರೆ ತರುವ ಮೊದಲೇ ಮೃತಪಟ್ಟಿದ್ದಾರೆ’ ಎಂದು ಪರೀಕ್ಷೆ ನಡೆಸಿದ ವೈದ್ಯರು ಘೋಷಿಸಿದ್ದಾರೆ.

ಕುಮಾರ್‌ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಪೊಲೀಸರು ಕುಮಾರ್ ಕುಟುಂಬದವರಿಗೆ ಕರೆ ಮಾಡಿ ತಿಳಿಸಿದ್ದರು. ದಾವಣಗೆರೆ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಬಂದ ಗ್ರಾಮಸ್ಥರು, ಸಂಬಂಧಿಕರು, ಭಾರತೀಯ ದಲಿತ ಸಂಘರ್ಷ ಸಮಿತಿಯ ಸದಸ್ಯರು ಪ್ರತಿಭಟನೆ ನಡೆಸಿದರು. ಘಟನೆಗೆ ಕಾರಣರಾದ ಇನ್‌ಸ್ಪೆಕ್ಟರ್‌ ಮತ್ತು ಪೊಲೀಸ್‌ ಸಿಬ್ಬಂದಿಯನ್ನು ಬಂಧಿಸಬೇಕು. 50 ಲಕ್ಷ ರೂಪಾಯಿ ಪರಿಹಾರ ನೀಡಬೇಕು. ಕುಮಾರ್‌ ಅವರ ಪತ್ನಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು.

ಕುಮಾರ್‌ ಅವರಿಗೆ 3 ವರ್ಷದ ಮಗಳು, ಒಂದೂವರೆ ವರ್ಷದ ಮಗ ಇದ್ದಾರೆ. ಅವರ ಶಿಕ್ಷಣದ ವೆಚ್ಚ ಭರಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾ ಸ್ಥಳಕ್ಕೆ ಎಸ್ಪಿ ಸಿ.ಬಿ. ರಿಷ್ಯಂತ್‌ ಭೇಟಿ ನೀಡಿದರು. ಮನೆಯವರಿಗೆ ಸಾಂತ್ವನ ಹೇಳಿದರು.

‘ಸಿಇಎನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕುಮಾರ್‌ ಅವರನ್ನು ಸಿಬ್ಬಂದಿ ಕರೆದಾಗ ಅವರು ಬಂದಿದ್ದರು. ಅವರು ಶ್ರೀ ಲಾಡ್ಜ್‌ನಲ್ಲಿ ಮೃತಪಟ್ಟಿದ್ದಾರೆ. ಸಂಬಂಧಿಕರು ಏನು ಆರೋಪ ಮಾಡುತ್ತಿದ್ದಾರೋ ಅದರಂತೆ ಪ್ರಕರಣ ದಾಖಲು ಮಾಡಿಕೊಳ್ಳುತ್ತೇವೆ. ಪ್ರಾಥಮಿಕ ತನಿಖೆ ಮಾಡುತ್ತೇವೆ. ಬಳಿಕ ಸಿಐಡಿ ಪೊಲೀಸರು ತನಿಖೆ ನಡೆಸಲಿದ್ದಾರೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್‌ ಸುದ್ದಿಗಾರರಿಗೆ ತಿಳಿಸಿದರು.